ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಯಾಣಿಕರಿದ್ದ ಬಸ್ ಬರಾಕರ್ ನದಿಗೆ ಉರುಳಿದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಾರ್ಖಂಡ್‌ನಲ್ಲಿ ನಡೆದಿದೆ. 15 ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದು, ಎಲ್ಲರನ್ನೂ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಡೆಪ್ಯುಟಿ ಕಮಿಷನರ್ ನಮನ್ ಪ್ರಿಯೇಶ್, ಸಾವು-ನೋವುಗಳನ್ನು ಖಚಿತಪಡಿಸಿದ್ದಾರೆ.
ಜಾರ್ಖಾಂಡ್‌ನ ಗಿರಿದಿಹ್‌ನಲ್ಲಿ ಶನಿವಾರ ತಡರಾತ್ರಿ ಈ ಅಪಘಾತ ಸಂಭವಿಸಿದೆ. ಅಪಘಾತದ ಸ್ಥಳದಲ್ಲಿ ಜಿಲ್ಲಾಡಳಿತದ ಅಧಿಕಾರಿಗಳು ಮತ್ತು ಸ್ಥಳೀಯರಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಬಸ್ ನದಿಗೆ ಉರುಳಲು ಕಾರಣ ತನಿಖೆಯಿಂದಷ್ಟೇ ತಿಳಿದುಬರಬೇಕಿದೆ.
ಅಪಘಾತ ಕುರಿತು ಜಾರ್ಖಾಂಡ್ ಮುಖ್ಯಮಂತ್ರಿ ಆಘಾತ ವ್ಯಕ್ತಪಡಿಸಿದ್ದು, “ರಾಂಚಿಯಿಂದ ಗಿರಿದಿಹ್‌ಗೆ ತೆರಳುತ್ತಿದ್ದ ಬಸ್ ಬರಾಕರ್ ನದಿಗೆ ಬಿದ್ದಿದೆ ಎಂಬ ದುಃಖದ ಸುದ್ದಿ ನನಗೆ ಬಂದಿದೆ. ಜಿಲ್ಲಾಡಳಿತದಿಂದ ರಕ್ಷಣಾ ಕಾರ್ಯ ನಡೆಯುತ್ತಿದೆ ಮತ್ತು ಜೆಎಂಎಂ ನಾಯಕರು ಮತ್ತು ಕಾರ್ಯಕರ್ತರು ಸಹ ಈ ಪ್ರಯತ್ನಕ್ಕೆ ಕೈಜೋಡಿಸಿದ್ದಾರೆ” ಎಂದು ಸಿಎಂ ಹೇಮಂತ್ ಸೊರೆನ್ ಟ್ವೀಟ್ ಮಾಡಿದ್ದಾರೆ.