ಹೊಸದಿಗಂತ ಡಿಜಿಟಲ್ ಡೆಸ್ಕ್:
ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿರುವ ಡೇರಾ ಸಚ್ಚಾ ಸೌಧದ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್’ಗೆ ಮತ್ತೆ 30 ದಿನಗಳ ಪೆರೋಲ್ ನೀಡಲಾಗಿದೆ.
ಈ ಮೂಲಕ ಗುರ್ಮಿತ್ ಅವರಿಗೆ 11ನೇ ಬಾರಿ ಪೆರೋಲ್ ನೀಡಲಾಗಿದೆ. ಇಂದು ಮುಂಜಾನೆ 5:30ರ ಸುಮಾರಿಗೆ ರೋಹ್ಟಕ್‌ನ ಸುನಾರಿಯಾ ಜೈಲಿನಿಂದ ಗುರ್ಮೀತ್ ರಾಮ್ ರಹೀಮ್ ಸಿಂಗ್ ಬಿಡುಗಡೆಯಾಗಿದ್ದು, ಅವರನ್ನು ಬರಮಾಡಿಕೊಳ್ಳಲು ಅವರ ಆಪ್ತ ಸಹಾಯಕಿ ಹನಿಪ್ರೀತ್ ಹಾಜರಿದ್ದರು.
ಜೈಲಿನಿಂದ ಗುರ್ಮಿತ್ ನೇರವಾಗಿ ಸಿರ್ಸಾದಲ್ಲಿರುವ ಡೇರಾಗೆ ತೆರಳಿದ್ದು, ಇಲ್ಲಿ ಹತ್ತು ದಿನಗಳ ಕಾಲ ಕಳೆದು, ಇಪ್ಪತ್ತು ದಿನಗಳನ್ನು ಉತ್ತರ ಪ್ರದೇಶದ ಬಾಗ್‌ಪತ್‌ನಲ್ಲಿರುವ ಬರ್ನಾವಾ ಆಶ್ರಮದಲ್ಲಿ ಕಳೆಯಲಿದ್ದಾರೆಂದು ವರದಿಗಳು ತಿಳಿಸಿವೆ.
ತಮ್ಮ ಇಬ್ಬರು ಶಿಷ್ಯೆಯರ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ 20 ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿರುವ ಸಿರ್ಸಾ ಮೂಲದ ರಾಮ್ ರಹೀಮ್ ಸಿಂಗ್ ಹರಿಯಾಣದ ರೋಹ್ಟಕ್‌ನ ಸುನಾರಿಯಾ ಜೈಲು ವಾಸ ಅನುಭವಿಸುತ್ತಿದ್ದಾರೆ.
ಪತ್ರಕರ್ತ ರಾಮ್ ಚಂದರ್ ಛತ್ರಪತಿ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆಯೂ ಜೀವಾವಧಿ ಶಿಕ್ಷೆ ವಿಧಿಸಲಾಗಿದ್ದು, ಇದರ ಶಿಕ್ಷೆ ಪ್ರಸ್ತುತ ಶಿಕ್ಷೆಯ ಅವಧಿ ಮುಗಿದ ನಂತರ ಪ್ರಾರಂಭವಾಗಲಿದೆ.