ಹೊಸದಿಗಂತ ವರದಿ,ಕಲಬುರಗಿ:
ಕಲ್ಯಾಣ ಕರ್ನಾಟಕ ಭಾಗದಲ್ಲಿನ ಅಪೌಷ್ಟಿಕತೆ ನಿವಾರಣೆ ಮತ್ತು ಆರೋಗ್ಯ ಸೌಕರ್ಯ ಹೆಚ್ಚಿಸಲು ಪ್ರಸಕ್ತ ವರ್ಷ ಮಂಡಳಿಯು “ಆರೋಗ್ಯ ಆವಿಷ್ಕಾರ” ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇದಕ್ಕಾಗಿ 250 ರಿಂದ 300 ಕೋಟಿ ರೂ. ಅನುದಾನ ಮೀಸಲಿರಿಸಿದೆ ಎಂದು ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷ ಡಾ.ಅಜಯ್ ಸಿಂಗ್ ಹೇಳಿದರು.
ಶನಿವಾರ ಇಲ್ಲಿನ ಕೆ.ಕೆ.ಆರ್.ಡಿ.ಬಿ ಮಂಡಳಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಪ್ರದೇಶದ 7 ಜಿಲ್ಲೆಗಳಲ್ಲಿ 70 ಪಿ.ಎಚ್.ಸಿ.ಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಪ್ರಸಕ್ತ ಸಾಲಿನ ಆಯವ್ಯಯದಲ್ಲಿ 221 ಕೋಟಿ ರೂ. ವೆಚ್ಚದಲ್ಲಿ 46 ಪ್ರಾಥಮಿಕ ಅರೋಗ್ಯ ಕೇಂದ್ರ ತೆರೆಯಲು ಸರ್ಕಾರ ಘೋಷಿಸಿದ್ದು, ಇದರಲ್ಲಿ 33ಕ್ಕೆ ಮಂಡಳಿ ಅನುದಾನ ನೀಡಲಿದೆ. ಉಳಿದ ಆಸ್ಪತ್ರೆಗೆ ಆರೋಗ್ಯ ಇಲಾಖೆ, ವಿಜಯನಗರ ಜಿಲ್ಲೆಯಲ್ಲಿ ಮಿನರಲ್ ಫಂಡ್‍ನಿಂದ ಹಣ ಪಡೆಯಲಾಗುತ್ತದೆ ಎಂದರು.
ರಾಜ್ಯದ ಗಾಮೀಣ ಪ್ರದೇಶದಲ್ಲಿ ವಿಭಾಗವಾರು ಪಿ.ಎಚ್.ಸಿ. ಸಂಖ್ಯೆ ಗಮನಿಸಿದಾಗ ಬೆಂಗಳೂರು ವಿಭಾಗದಲ್ಲಿ 1.13 ಕೋಟಿ ಜನಸಂಖ್ಯೆಗೆ 646, ಬೆಳಗಾವಿ ವಿಭಾಗದಲ್ಲಿ 1.18 ಕೋಟಿ ಜನಸಂಖ್ಯೆಗೆ 455, ಮೈಸೂರು ವಿಭಾಗದಲ್ಲಿ 94.95 ಲಕ್ಷ ಜನಸಂಖ್ಯೆಗೆ 659 ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದರೆ, ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ 1.08 ಕೋಟಿ ಜನಸಂಖ್ಯೆಗೆ 333 ಪಿ.ಎಚ್.ಸಿ. ಇವೆ. ಇವು ಇತರೆ ಭಾಗಕ್ಕಿಂತ ತುಂಬಾನೆ ಕಡಿಮೆ ಇದೆ. ಇದು ಸಹ ಆರೋಗ್ಯ ಕ್ಷೇತ್ರದಲ್ಲಿ ಪ್ರದೇಶ ಹಿಂದುಳಿಯಲು ಕಾರಣವಾಗಿದ್ದು, ಈ ಅಂತರವನ್ನು ಕಡಿಮೆ ಮಾಡಲು ಪಿ.ಎಚ್.ಸಿ. ಸ್ಥಾಪಿಸಲಾಗುತ್ತಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಂಡಳಿ ಕಾರ್ಯದರ್ಶಿ ಎಂ. ಸುಂದರೇಶ ಬಾಬು, ಉಪ ಕಾರ್ಯದರ್ಶಿ ಪ್ರಮೀಳಾ ಎಂ.ಕೆ., ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಡಾ. ಶಂಕರ ಮೈಲಾರೆ ಇದ್ದರು.