ಹೊಸದಿಗಂತ ವರದಿ ಪುತ್ತೂರು
ಪುತ್ತೂರಿನ ಶ್ರೀ ಶಾರದಾ ಕಲಾಕೇಂದ್ರ ಟ್ರಸ್ಟ್ ( ರಿ) ಸಂಸ್ಥೆಯ ಮೂವತ್ತನೆ ವಾರ್ಷಿಕೋತ್ಸವ ತ್ರಿಂಶತಿ ಸಂಭ್ರಮ ಕಾರ್ಯಕ್ರಮ ಪುತ್ತೂರಿನಲ್ಲಿ ನೆರವೇರಿದೆ.
ಕಾರ್ಯಕ್ರಮಕ್ಕೆ ಹರೀಶ್ ಕಿಣಿ ಚಾಲನೆ ನೀಡಿದ್ದು, ಸಂಗೀತ ಗುರುಗಳಾದ ವಿದ್ವಾನ್ ಸುದರ್ಶನ್ ಭಟ್ ನಿರ್ದೇಶನದಲ್ಲಿ ವಿದ್ಯಾರ್ಥಿನಿಯರಿಂದ ಗಾಯನ ಕಾರ್ಯಕ್ರಮ ನಡೆಯಿತು. ತದನಂತರ ಕೊಳಲು ವಾದನ ಗುರುಗಳಾದ ಶ್ರೀ ಸುರೇಂದ್ರ ಆಚಾರ್ಯ ರವರ ಶಿಷ್ಯ ವೃಂದ ಸುಶ್ರಾವ್ಯ ಕೊಳಲು ವಾದನ ನಡೆಸಿಕೊಟ್ಟರು.
ಸನಾತನ ಮೂಲದಿಂದ ಮೂಡಿ ವಿಕಸಿತಗೊಂಡ ಸಂಗೀತ ಭರತನಾಟ್ಯ, ಕಾವ್ಯ, ತಾಳವಾದ್ಯಾದಿ ಕಲೆಗಳು ಸುಸಂಸ್ಕೃತ ಸಮಾಜದ ಕಣ್ಣುಗಳಂತೆ, ಕಲಾ ಶಿಕ್ಷಕರು ಹೃದಯವಿದ್ದಂತೆ, ಸಮಾಜ ಹಾಗೂ ಸರಕಾರಕ್ಕೆ ಕಲಾವಿದರ ಹಾಗೂ ಕಲಾಶಿಕ್ಷಣ ಸಂಸ್ಥೆಗಳನ್ನು ರಕ್ಷಿಸಿ ಪೋಷಿಸುವ ಗುರುತರ ಹೊಣೆಗಾರಿಕೆ ಇದೆ ಎಂದು ಅಂತರ್ಜಲ ಸಂಶೋಧಕರು ಹಾಗೂ ವಾಹಿನಿ ಕಲಾಸಂಘ ದರ್ಬೆ ಪುತ್ತೂರಿನ ರಾಜ್ಯಾಧ್ಯಕ್ಷರಾದ ಮಧುರಕಾನನ ಗಣಪತಿ ಭಟ್ಟರು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ವಿದುಷಿ ನಯನ ವಿ ರೈ ಮಾತನಾಡಿ, ಶಿಕ್ಷಣಾನಂತರದಲ್ಲಿ ಕಲಿಸಿದ ಗುರುಗಳ ನೆನಪು ಸದಾ ಇರಿಸಿಕೊಂಡು, ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ನಿಮಿತ್ತ ತೆರಳಿದರೂ ಕಲಿತ ಕಲೆಗಳನ್ನು ಯಾವತ್ತೂ ಬೆಳೆಸಿ ಪೋಷಿಸುವತ್ತ ಆಸಕ್ತರಾಗಿರಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಶಾರದಾ ಕಲಾಸಂಸ್ಥೆಯ ಕಾರ್ಯವಾಹಕ ನಿರ್ದೇಶಕ ವಿದ್ವಾನ್ ಸುದರ್ಶನ್, ಸಹಾಯಕ ನಿರ್ದೇಶಕರಾದ ದಿವ್ಯಶ್ರೀ ಸುದರ್ಶನ್, ಖಜಾಂಚಿ ಮಾಲಿನಿ ಭಟ್, ಸಹಶಿಕ್ಷಕಿ ವಿದುಷಿ ಸಂಧ್ಯಾ ಗಣೇಶ್ ಪುತ್ತೂರು, ಮೃದಂಗ ಶಿಕ್ಷಕ ವಿದ್ವಾನ್ ಶ್ಯಾಮ ಭಟ್ ಸುಳ್ಯ, ಕೊಳಲು ಶಿಕ್ಷಕ ವಿದ್ವಾನ್ ಸುರೇಂದ್ರ ಆಚಾರ್ಯ ಪುತ್ತೂರು, ಹಾಗೂ ಹಲವಾರು ಗಣ್ಯರು ಉಪಸ್ಥಿತರಿದ್ದರು.