ಹೊಸದಿಗಂತ ವರದಿ,ಬೆಂಗಳೂರು:
ತನ್ನ ಪತ್ನಿಯನ್ನು ಕೊಲೆಗೈದು, ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು 31 ವರ್ಷಗಳ ಬಳಿಕ ಹೆಬ್ಬಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹೆಬ್ಬಾಳ ನಿವಾಸಿ ಸುಬ್ರಮಣಿ ಅಲಿಯಾಸ್ ಹುಸೇನ್ ಸಿಕ್ಕಂದರ್ (56) ಬಂಧಿತ. ಇತ್ತೀಚೆಗೆ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಹಳೇ ಪ್ರಕರಣಗಳ ಇತ್ಯರ್ಥ ಮಾಡುವಂತೆ ಸೂಚಿಸಿರುವ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದರು. ಆರೋಪಿಯನ್ನು ಚಿಕ್ಕಮಗಳೂರಿನಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು. 1993ರಲ್ಲಿ ತನ್ನ ಪತ್ನಿಯ ಶೀಲ ಶಂಕಿಸಿ, ಹತ್ಯೆಗೈದಿದ್ದ ಸುಬ್ರಮಣಿಯನ್ನು ಪೊಲೀಸರು ಅಂದು ಬಂಧಿಸಿದ್ದರು. ನಂತರ ಜಾಮೀನು ಪಡೆದು ಬಿಡುಗಡೆಯಾಗಿದ್ದ ಆರೋಪಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಮತ್ತೊಂದೆಡೆ ಪೊಲೀಸರು ಆತನ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಂಡಿರಲಿಲ್ಲ. ಈ ಮಧ್ಯೆ ಕೆಲ ವರ್ಷಗಳ ಹಿಂದೆ ನ್ಯಾಯಾಲಯ, ಆರೋಪಿಯ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಿತ್ತು. ಬಳಿಕ ಪೊಲೀಸರು ಕಾರ್ಯಾಚರಣೆ ನಡೆಸಿದರೂ ಆತ ಸಿಕ್ಕಿರಲಿಲ್ಲ. ಈ ಸಂಬಂಧ ನಗರ ಪೊಲೀಸ್ ಆಯುಕ್ತರು ಎಲ್ ಪಿಆರ್ ಪ್ರಕರಣಗಳ ಇತ್ಯರ್ಥಕ್ಕೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಬಾತ್ಮೀದಾರರು ಹಾಗೂ ತಾಂತ್ರಿಕ ತನಿಖೆ ನಡೆಸಿದಾಗ ಆರೋಪಿಯು ಜಾಮೀನು ಪಡೆದು ಮೊದಲಿಗೆ ಕೇರಳಕ್ಕೆ ಹೋಗಿದ್ದ ಎಂದು ತಿಳಿದಿದೆ.
ಸುಬ್ರಮಣಿ, ಪೊಲೀಸರು ತನ್ನನ್ನು ಹುಡುಕಾಡುತ್ತಿರುವ ಮಾಹಿತಿ ತಿಳಿದು ಪೊಲೀಸರು ಪುನಃ ನನ್ನನ್ನು ಬಂಧಿಸುತ್ತಾರೆ ಎಂಬ ಭೀತಿಯಲ್ಲಿ ಮುಸ್ಲಿಂ ಸಮುದಾಯದ ಆಚರಣೆಗಳು, ಪದ್ಧತಿಗಳನ್ನು ತಿಳಿದುಕೊಂಡು ಸುಬ್ರಮಣಿ ಎಂಬ ತನ್ನ ಹೆಸರಿನ್ನು ಹುಸೇನ್ ಸಿಕಿಂದರ್ ಎಂದು ಬದಲಾಯಿಸಿಕೊಂಡಿದ್ದನು. ತಾನೂ ಮುಸ್ಲಿಂ ಸಮುದಾಯದವನು ಎಂದು ಸ್ಥಳೀಯರನ್ನು ನಂಬಿಸಿ, ಅವರೊಂದಿಗೆ ಬಾಂಧವ್ಯ ಬೆಳೆಸಿಕೊಂಡಿದ್ದ. ಕೆಲ ವರ್ಷಗಳ ಹಿಂದೆ ಚಿಕ್ಕಮಗಳೂರಿಗೆ ಸ್ಥಳಾಂತರಗೊಂಡು ಮಸೀದಿಯೊಂದರಲ್ಲಿ ಮೌಲ್ವಿಯಾಗಿದ್ದ ಎಂದು ಹೇಳಲಾಗಿದೆ.
ಹೆಬ್ಬಾಳ ಪೊಲೀಸರು ಆರೋಪಿಯ ಬಗ್ಗೆ ಸ್ಥಳೀಯರು ಹಾಗೂ ತಾಂತ್ರಿಕ ತನಿಖೆ ನಡೆಸಿದಾಗ ಆತ ಚಿಕ್ಕಮಗಳೂರಿನ ಮಸೀದಿಯಲ್ಲಿ ಮೌಲ್ವಿಯಾಗಿರುವುದು ಪತ್ತೆಯಾಗಿದೆ. ಈ ಕುರಿತು ಸ್ಥಳೀಯರ ಪೊಲೀಸರ ನೆರವಿನಿಂದ ಸುಮಾರು ದಿನಗಳ ಕಾಲ ಪೊಲೀಸರು ಮಸೀದಿ ಬಳಿಯೇ ಕಾರ್ಯಾಚರಣೆ ಕೈಗೊಂಡಾಗ ಆತನೇ ಸುಬ್ರಮಣಿ ಎಂಬುದು ಕೆಲ ಸುಳಿವುಗಳು ಹಾಗೂ ಮಾಹಿತಿಗಳನ್ನಾಧರಿಸಿ, ಆತನನ್ನು ಚಿಕ್ಕಮಗಳೂರಿನಲ್ಲಿ ಬಂಧಿಸಿ, ನಗರಕ್ಕೆ ಕರೆತಂದಿದ್ದಾರೆ. ಇದೀಗ ಆರೋಪಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.