ಹೊಸದಿಗಂತ ವರದಿ ಬಾಗಲಕೋಟೆ:
ಮುಧೋಳ ತಾಲೂಕಿನ ರನ್ನ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಆರಂಭದಿಂದ ಇಲ್ಲಿಯವರೆಗೆ 311 ಕೋಟಿ 63 ಲಕ್ಷ 20 ಸಾವಿರ ರೂ. ನಷ್ಟ ಉಂಟಾಗಿದೆ. ಬಿಜೆಪಿಯ ಮಾಜಿ ಸಚಿವ ಗೋವಿಂದ ಕಾರಜೋಳ ಹಾಗೂ ರಾಮಣ್ಣ ತಳೇವಾಡ ಅಧ್ಯಕ್ಷರಾಗಿದ್ದ ವೇಳೆ ಹೆಚ್ಚು ನಷ್ಟವಾಗಿದೆ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಆರೋಪಿಸಿದರು.
ನವನಗರದ ಪತ್ರಿಕಾಭವನದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್ಖಾನೆಯ ಆರಂಭದಿಂದ ಇಲ್ಲಿಯವರೆಗೆ ಎಷ್ಟು ಹಗರಣ ಆಗಿದೆ ಎಂಬುದರ ಕುರಿತು ತನಿಖೆ ನಡೆಯುತ್ತಿದೆ. ಎಲ್ಲಾ ಸತ್ಯಾಸತ್ಯತೆ ಹೊರ ಬೀಳಲಿದೆ ಎಂದರು.
ಈಗಾಗಲೇ ಕಾರ್ಖಾನೆಯ ಕಾರ್ಮಿಕರ ಹೆಸರಿನಲ್ಲಿ ಕೋಟ್ಯಂತರ ರೂ. ಸಾಲ ಪಡೆದು ನಷ್ಟ ಉಂಟು ಮಾಡಿರುವ ಕುರಿತು ಎಫ್ಐಆರ್ ದಾಖಲಾಗಿದೆ. ಕೋರ್ಟ್ ನಲ್ಲಿ ಒಂದು ಕೇಸ್ ನಡೆಯುತ್ತಿದ್ದು, ಎಲ್ಲಾ ಹಂತದಲ್ಲಿ ತನಿಖೆಯಾಗುತ್ತಿದೆ. ತಪ್ಪು ಮಾಡಿದವರನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.
ರನ್ನ ಸಹಕಾರಿ ಸಕ್ಕರೆ ಕಾರ್ಖಾನೆ ಗುಜರಿಗೆ ಹೋಗಬಾರದು ಎಂದು ಕೆಲಸ ಮಾಡುತ್ತೇನೆ. ರೈತರು ಹಾಗೂ ಕಾರ್ಮಿಕರ ಹಿತ ಕಾಯುವೆ. ನನ್ನದು ಒಂದೇ ನಾಲಿಗೆ, ಎರಡು ನಾಲಿಗೆ ಇಲ್ಲ. ಮಾತಾಡಿದ್ದನ್ನು ಮಾಡಿಯೇ ಮಾಡುತ್ತೇನೆ. ಕಾರ್ಖಾನೆ ಆರಂಭಗೊಳಿಸುವುದು ನನ್ನ ಬದ್ದತೆ ಎಂದರು.
ಕಾರ್ಖಾನೆಯಲ್ಲಿ ನಡೆದಿರುವ ಅಕ್ರಮ ಬಗ್ಗೆ ಒಂದೊಂದಾಗಿ ದಾಖಲೆ ತೆಗೆಸಿ ಎಲ್ಲ ಕ್ರಮ ವಹಿಸಲಾಗುವುದು. ಗೋವಿಂದ ಕಾರಜೋಳ ಅಧ್ಯಕ್ಷರ ಅವಧಿಯಲ್ಲಿ ಕಾರ್ಖಾನೆಗೆ 14 ಕೋಟಿ ರೂ.ಗೂ ಹೆಚ್ಚು ನಷ್ಟ ಉಂಟಾಗಿದೆ. ಕಾರ್ಖಾನೆ ಬಂದ್ ಆದಾಗ, ಕಾರ್ಖಾನೆಯ ಕಾರ್ಮಿಕರು ತಮ್ಮ ಹೋರಾಟ ಮಾಡುವಾಗ ಸ್ಥಳಕ್ಕೆ ಬೆಂಕಿ ಹಚ್ಚಿದವರು ಯಾರು? ಅದೇ ಕಾರ್ಮಿಕರ ಮೇಲೆ ಕೇಸ್ ಹಾಕಿಸಿದವರು ಯಾರು ಎಂಬುದು ಕಾರಜೋಳ ಸಾಹೇಬರಿಗೆ ಗೊತ್ತಿಲ್ಲವೇ ಎಂದು ತಿಮ್ಮಾಪುರ ಅವರು ಪ್ರಶ್ನಿಸಿದರು.
2006 ರಿಂದ 2012ರ ವರೆಗೆ ಕಾರಜೋಳ ಸಾಹೇಬರು ತಮ್ಮ ಡ್ರೈವರ್‌ಗೆ ಎಲ್ಲಿಂದ ಪಗಾರ ಕೊಟ್ಟಿದ್ದಾರೆ ಎಂಬ ದಾಖಲೆ ನಮ್ಮಲ್ಲಿವೆ. ಶಾಸಕನಾಗಿದ್ದ ಸಂದರ್ಭದಲ್ಲಿ ತಮ್ಮ ಡ್ರೈವರ್‌ಗೆ ಪಗಾರವನ್ನು ಕಾರ್ಖಾನೆಯಿಂದಲೇ ತೆಗೆದಿದ್ದಾರೆ. ಇದು ರೈತರ ಹಾಗೂ ಕಾರ್ಖಾನೆ ಬಗ್ಗೆ ನಿಮಗೆ ಇರುವ ಬದ್ದತೆಯೇ ಕಾರಜೋಳ ಸಾಹೇಬರೇ ಎಂದು ಪ್ರಶ್ನೆ ಮಾಡಿದರು.
ನಿಮ್ಮ ಕುಟುಂಬ ಹಾಗೂ ನಿಮ್ಮ ಮಗ ಏನ್ ಮಾಡಿದ್ದೀರಿ ಎಂದು ಮುಧೋಳ ಜನತಾ ನ್ಯಾಯಾಲಯ ಗಮನಿಸಿದೆ. ನಿಮ್ಮ ಸ್ಥಿತಿಮಿತಿ ಕಳೆದುಕೊಂಡು ಮಾತನಾಡಬೇಡಿ ಕಾರಜೋಳ ಸಾಹೇಬರೇ ಎಂದು ವ್ಯಂಗ್ಯವಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಪೀರಪ್ಪ ಮ್ಯಾಗೇರಿ,ವಿಠ್ಠಲ ತುಂಬರಮಟ್ಟಿ, ಕಾಳಪ್ಪ ಕಂಬಾರ, ಪರಮಾನನಂದ ಇದ್ದರು.