ಆರೋಗ್ಯ ಇಲಾಖೆಯ 32,870 ಖಾಲಿ ಹುದ್ದೆಗಳು ಶೀಘ್ರ ಭರ್ತಿ: ದಿನೇಶ್‌ ಗುಂಡೂರಾವ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಆರೋಗ್ಯ ಇಲಾಖೆಯಲ್ಲಿ ಮಂಜೂರಾದ 69,915 ಹುದ್ದೆಗಳ ಪೈಕಿ 32,870 ಹುದ್ದೆಗಳು ಖಾಲಿ ಉಳಿದಿದ್ದು, ಹುದ್ದೆ ಭರ್ತಿಗೆ ಶೀಘ್ರದಲ್ಲೇ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಅವರು ಸೋಮವಾರ ಹೇಳಿದರು.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಎಂ.ಜಿ. ಮೂಳೆ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಸುಮಾರು 4,000 ಗ್ರೂಪ್ ಡಿ ಸಿಬ್ಬಂದಿಯನ್ನು ಹೊರಗುತ್ತಿಗೆ ಮೂಲಕ ನೇಮಿಸಿಕೊಳ್ಳಲಾಗಿದೆ, ಆದರೆ ಸುಮಾರು 7,000 ಹುದ್ದೆಗಳು ಖಾಲಿ ಉಳಿದಿವೆ. ಹೆಚ್ಚುವರಿಯಾಗಿ, 13,448 ಉದ್ಯೋಗಿಗಳು ಪ್ರಸ್ತುತ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ ಅಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ ಮತ್ತು ಗ್ರೂಪ್ A ನಿಂದ ಗ್ರೂಪ್ D ವರೆಗೆ ಒಟ್ಟು 18,048 ವ್ಯಕ್ತಿಗಳನ್ನು ಗುತ್ತಿಗೆಯ ಮೇಲೆ ನೇಮಿಸಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ 1,500 ಹುದ್ದೆಗಳನ್ನು ತುಂಬಲಾಗುತ್ತಿದೆ.

ರಾಜ್ಯದಲ್ಲಿ ಖಾಲಿಯಿರುವ ತಜ್ಞ ವೈದ್ಯರನ್ನು ಮತ್ತು ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳನ್ನು ಕೆಲವು ಷರತ್ತಿಗೊಳಪಟ್ಟು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಅನುಮತಿ ನೀಡಲಾಗಿದೆ. ಇಲಾಖೆಯ ಮುಖಾಂತರ ಸೇವಾನಿರತ ಸ್ನಾತಕೋತ್ತರ ವ್ಯಾಸಂಗ ಪೂರೈಸಿ ಬರುವ ತಜ್ಞ ವೈದ್ಯರನ್ನು ತಜ್ಞತ ಹುದ್ದೆಗೆ ನೇಮಿಸಲಾಗುತ್ತಿದೆ. ಸ್ನಾತಕೋತ್ತರ ವ್ಯಾಸಂಗ ಪೂರೈಸಿ ಒಂದು ವರ್ಷದ ಕಡ್ಡಾಯ ಸೇವೆಗಾಗಿ ಬರುವ ವೈದ್ಯ ಅಭ್ಯರ್ಥಿ/ತಜ್ಞ ವೈದ್ಯ ಅಭ್ಯರ್ಥಿಗಳನ್ನು ವೈದ್ಯರ/ತಜ್ಞರ ಹುದ್ದೆಗಳಿಗೆ ಭರ್ತಿ ಮಾಡಲು ಅವಕಾಶ ಕಲ್ಪಿಸಲಾಗಿದ್ದು, ಇಲಾಖೆಯಲ್ಲಿ ಖಾಲಿಯಿರುವ 120 ತಜ್ಞ ವೈದ್ಯರು ಹಾಗೂ 100 ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳ ಹುದ್ದೆಗಳನ್ನು ನೇರ ನೇಮಕಾತಿ ಮುಖಾಂತರ ಭರ್ತಿ ಮಾಡಿಕೊಳ್ಳಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ಮೂಲಕ ರೋಗಿಗಳಿಗೆ ಅಡಚಣೆಯಾಗದಂತೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!