ದಿಗಂತ ವರದಿ ಕಾಸರಗೋಡು:
ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧವು ಕೇರಳಕ್ಕೂ ಹೊಡೆತ ನೀಡಿದ್ದು , ಶಿಕ್ಷಣ, ಉದ್ಯೋಗ ಮುಂತಾದ ವಿಭಾಗಗಳಲ್ಲಾಗಿ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರಲ್ಲಿ 3,500 ಮಂದಿ ಕೇರಳೀಯರು ಸೇರಿದ್ದಾರೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿರುವನಂತಪುರದಲ್ಲಿ ತಿಳಿಸಿದ್ದಾರೆ.
ಉಕ್ರೇನ್ ನಲ್ಲಿ ಸಿಲುಕಿರುವ ಕೇರಳೀಯರ ತಕ್ಷಣದ ಸ್ಥಳಾಂತರಕ್ಕಾಗಿ ಕೇಂದ್ರ ವಿದೇಶಾಂಗ ಸಚಿವಾಲಯದ ಮೂಲಕ ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ವಿವರಗಳನ್ನು ಹಸ್ತಾಂತರಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಸುಮಾರು 3,500 ಜನರು ಈಗಾಗಲೇ ನೋರ್ಕಾ ರೂಟ್ಸ್ ಕಂಟ್ರೋಲ್ ರೂಮ್‌ನಲ್ಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಕೇರಳದ ಎಲ್ಲಾ ನಾಲ್ಕು ವಿಮಾನ ನಿಲ್ದಾಣಗಳು ಮತ್ತು ಹೊಸದಿಲ್ಲಿ ಹಾಗೂ ಮುಂಬೈಗೆ ಆಗಮಿಸುವ ಕೇರಳೀಯರನ್ನು ಸ್ವಾಗತಿಸಲು ನೋರ್ಕಾ ಸಂಸ್ಥೆಯು ಅಗತ್ಯದ ಕ್ರಮಗಳನ್ನು ತೆಗೆದುಕೊಂಡಿದೆ. ಕೊಚ್ಚಿ ವಿಮಾನ ನಿಲ್ದಾಣದಿಂದ ರಾಜ್ಯದ ಎಲ್ಲಾ 14 ಜಿಲ್ಲೆಗಳಿಗೆ ಉಕ್ರೇನ್ ನಿಂದ ಆಗಮಿಸುವ ವಿದ್ಯಾರ್ಥಿಗಳನ್ನು ಕಳುಹಿಸಲು ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಸಿಎಂ ನುಡಿದರು.
ಇದೇ ವೇಳೆ ಉಕ್ರೇನ್‌ನಲ್ಲಿ ಸಿಲುಕಿರುವ ಮಲಯಾಳಿಗರಿಗೆ ಸಹಾಯ ಮಾಡಲು ನೋರ್ಕಾ ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಂಡಿದೆ. ಭಾರತೀಯ ರಾಯಭಾರ ಕಚೇರಿ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದೊಂದಿಗೆ ನಾವು ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ನೋರ್ಕಾ ಅಧಿಕಾರಿಗಳು ಟ್ವೀಟ್ ಮಾಡಿದ್ದಾರೆ.