ಹೊಸದಿಗಂತ ಡಿಜಿಟಲ್ ಡೆಸ್ಕ್ :
ಇಂದಿನಿಂದ ಮಂತ್ರಾಲಯ ಸೇರಿದಂತೆ ರಾಯರ ಮಠಗಳಲ್ಲಿ ಗುರುರಾಘವೇಂದ್ರ ಸ್ವಾಮಿ ಆರಾಧನಾ ಮಹೋತ್ಸವ ಆರಂಭವಾಗಲಿದೆ. ಜೊತೆಗೆ 7 ದಿನಗಳ ಕಾಲ ಸಪ್ತರಾತ್ರೋತ್ಸವ ನಡೆಯಲಿದೆ.
ಇಂದಿನಿಂದ ಗುರುರಾಘವೇಂದ್ರ ಸ್ವಾಮಿಯವರ 354ನೇ ಆರಾಧನಾ ಮಹೋತ್ಸವ ಆರಂಭವಾಗಲಿದ್ದು, ಆ.8ರಿಂದ 14ರವರೆಗೆ ಏಳು ದಿನಗಳ ಕಾಲ ಸಪ್ತರಾತ್ರೋತ್ಸವ ನಡೆಯಲಿದೆ.
ಇಂದು ಸಂಜೆ ಧ್ವಜಾರೋಹಣ ಮೂಲಕ ಸಪ್ತರಾತ್ರೋತ್ಸವಕ್ಕೆ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿಯವರು ಚಾಲನೆ ನೀಡಲಿದ್ದಾರೆ. ಗೋ, ಗಜ, ಅಶ್ವ, ಧಾನ್ಯ, ಲಕ್ಷ್ಮಿ ಪೂಜೆಯೊಂದಿಗೆ ವಿದ್ಯುಕ್ತ ಚಾಲನೆ ಸಿಗಲಿದೆ. ಆ.10ಕ್ಕೆ ಪೂರ್ವಾರಾಧನೆ, 11ಕ್ಕೆ ಮಧ್ಯಾರಾಧನೆ, 12ಕ್ಕೆ ಉತ್ತರಾರಾಧನೆ ನಡೆಯಲಿದೆ.
ತಿರುಮಲ ತಿರುಪತಿ ದೇವಸ್ಥಾನದಿಂದ ಇಂದು ಬರಲಿರುವ ಶ್ರೀನಿವಾಸ ದೇವರ ಶೇಷವಸ್ತ್ರ ರಾಯರ ಮೂಲಬೃಂದಾವನಕ್ಕೆ ಸಮರ್ಪಣೆ ಮಾಡಲಾಗುತ್ತದೆ. ಜೊತೆಗೆ ಮಠದ ಆವರಣದಲ್ಲಿ ನಿರ್ಮಾಣಗೊಂಡಿರುವ ಪುಷ್ಕರಣಿ ಆ.9ಕ್ಕೆ ಲೋಕಾರ್ಪಣೆಯಾಗಲಿದೆ. ಆ.10ರಂದು ಸಾಧಕರಿಗೆ ರಾಘವೇಂದ್ರ ಗುರು ಅನುಗ್ರಹ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಆ.12ರಂದು ಬೆಳಿಗ್ಗೆ 10 ಗಂಟೆಗೆ ಶ್ರೀಮಠದ ಮುಂದಿನ ರಾಜಬೀದಿಯಲ್ಲಿ ಮಹಾರಥೋತ್ಸವ ನಡೆಯಲಿದೆ.