ಹೊಸದಿಗಂತ ಡಿಜಿಟಲ್ ಡೆಸ್ಕ್:
ಸರ್ಕಾರಿ ಬಸ್ ಮತ್ತು ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ನಾಲ್ವರು ದಾರುಣವಾಗಿ ಮೃತಪಟ್ಟಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಗೊಲ್ಲಹಳ್ಳಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 150(ಎ) ರಲ್ಲಿ ನಡೆದಿದೆ.
ರಾಯಚೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಬಸ್ ಗೆ ಲಾರಿ ಇಂದು ಬೆಳಗಿನಜಾವ ಡಿಕ್ಕಿಯಾಗಿದ್ದು, ಬಸ್ ನಲ್ಲಿದ್ದ ನಾಲ್ವರು ಮೃತಪಟ್ಟಿದ್ದಾರೆ. ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಮತ್ತಿಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.
ರಾಯಚೂರಿನ ಮಾಬಮ್ಮ(35), ಮಸ್ಕಿ ಮೂಲದ ರಮೇಶ್(40), ಬೆಂಗಳೂರು ಮೂಲದ ಪಾರ್ವತಮ್ಮ(45) ಸೇರಿ ನಾಲ್ವರು ನಿಧನರಾಗಿದ್ದಾರೆ. 6ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಐಮಂಗಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.