ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ಮೂರು ತಿಂಗಳಿಂದ ಹಿಂಸಾಚಾರದಿಂದ ಮಣಿಪುರ ಕೊತ ಕೊತ ಕುದಿಯುತ್ತಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸ್ಪಂದಿಸುವಂತೆ ಆಗ್ರಹಿಸಿ ಪ್ರತಿಪಕ್ಷಗಳು ಸಂಸತ್ತಿನ ಅಧಿವೇಶನದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಸಮರ ಸಾರಿತ್ತು. ಇದೀಗ ಇಂದು ಲೋಕಸಭೆಯಲ್ಲಿ ಪ್ರಧಾನಿ ಮೋದಿ ಮಾತನಾಡಲಿದ್ದು, ಇದಕ್ಕೂ ಮುನ್ನ ಆ ರಾಜ್ಯದ 40 ಶಾಸಕರು ನಿಶ್ಶಸ್ತ್ರೀಕರಣ ಕೋರಿ ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದಾರೆ.
ಬುಧವಾರ ಸಂಜೆ ಪ್ರಧಾನಿಗೆ ಪತ್ರ ಸಲ್ಲಿಸಿದ ಶಾಸಕರು, ʻಮಣಿಪುರ ರಾಜ್ಯದಲ್ಲಿ ಎರಡು ಬುಡಕಟ್ಟು ಗುಂಪುಗಳ ನಡುವೆ ಭುಗಿಲೆದ್ದ ಹಿಂಸಾಚಾರವು ಮೂರು ತಿಂಗಳ ಕಾಲ ಅಶಾಂತಿಗೆ ಕಾರಣವಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆʼ. ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯಕ್ಕೆ ಪ್ರಧಾನಿ ಉತ್ತರ ನೀಡುವ ಮುನ್ನಾ ದಿನ ಮಣಿಪುರದ 40 ಶಾಸಕರು ಸಂಪೂರ್ಣ ನಿಶ್ಶಸ್ತ್ರೀಕರಣ ಮತ್ತು ಎನ್‌ಆರ್‌ಸಿ ಅನುಷ್ಠಾನ ಸೇರಿದಂತೆ ಆರು ಪ್ರಮುಖ ಬೇಡಿಕೆಗಳನ್ನು ಒಳಗೊಂಡ ಪತ್ರವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲಿಸಿದ್ದಾರೆ.
ಶಾಂತಿ ಮತ್ತು ಭದ್ರತೆಯ ವಾತಾವರಣ ಕಾಪಾಡಲು ಇಡೀ ರಾಜ್ಯಕ್ಕೆ ಸಂಪೂರ್ಣ ನಿಶ್ಶಸ್ತ್ರೀಕರಣದ ಅಗತ್ಯವಿದೆ ಎಂದು ಶಾಸಕರು ಸಹಿ ಮಾಡಿದ ಪತ್ರದಲ್ಲಿ ತಿಳಿಸಿದ್ದಾರೆ. ಎಲ್ಲಾ ಸಶಸ್ತ್ರ ಗುಂಪುಗಳಿಂದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದರು.