ಹೊಸದಿಗಂತ ಡಿಜಿಟಲ್ ಡೆಸ್ಕ್:
ಫ್ರಾನ್ಸ್ ದೇಶವು ಕಳೆದ ಕೆಲವು ದಿನಗಳಿಂದ ಅತ್ಯಂತ ಭೀಕರವಾದ ಕಾಡ್ಗಿಚ್ಚಿನಿಂದ ಭಸ್ಮವಾಗುತ್ತಿದೆ. ಈ ದೊಡ್ಡ ಕಾಡ್ಗಿಚ್ಚು, ದಕ್ಷಿಣ ಫ್ರಾನ್ಸ್‌ನ ಆಡ್ ಪ್ರಾಂತ್ಯದಲ್ಲಿ ವ್ಯಾಪಕ ನಾಶವನ್ನುಂಟುಮಾಡಿದ್ದು, ನಿಯಂತ್ರಿಸಲು ಸುಮಾರು 2,000ಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ವರದಿಯಾಗಿದೆ.
ಮತ್ತೊಂದೆಡೆ, ಈ ಬೆಂಕಿಯ ಕೆನ್ನಾಲಿಗೆಯಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿ, 13 ಮಂದಿ ಗಾಯಗೊಂಡಿದ್ದಾರೆ. ಜೊತೆಗೆ ಕನಿಷ್ಠ 25 ಮನೆಗಳಿಗೆ ಬೆಂಕಿಯಿಂದ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಾಡ್ಗಿಚ್ಚಿನಿಂದ 42 ಸಾವಿರ ಎಕರೆ ಭೂ ಪ್ರದೇಶ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಪ್ರಾನ್ಸ್ ರಾಜಧಾನಿ ಪ್ಯಾರಿಸ್ ಗಿಂತ ಅತಿ ದೊಡ್ಡ ಭೂ ಪ್ರದೇಶ ಕಾಡ್ಗಿಚ್ಚಿನಲ್ಲಿ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಕಳೆದ 75 ವರ್ಷಗಳಲ್ಲೇ ಇದು ಅತಿ ದೊಡ್ಡ ಕಾಡ್ಗಿಚ್ಚು ಎಂದು ಪ್ರಾನ್ಸ್ ದೇಶದ ಅಧಿಕಾರಿಗಳು ಹೇಳಿದ್ದಾರೆ.
ಈ ಭೀಕರ ಘಟನೆ ಹಿನ್ನೆಲೆಯಲ್ಲಿ, ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರಾನ್ ದೇಶದ ಎಲ್ಲ ಸಂಪನ್ಮೂಲಗಳನ್ನು ಬೆಂಕಿಯನ್ನು ನಂದಿಸಲು ಸಜ್ಜುಗೊಳಿಸಲಾಗಿದೆ ಎಂದು ಘೋಷಿಸಿದರು. ಅಗ್ನಿಶಾಮಕ ದಳದವರನ್ನು, ಎಲ್ಲಾ ತುರ್ತು ಸೇವೆಗಳನ್ನೂ ಬೆಂಬಲಿಸಿ. ಜನರು ಸರ್ಕಾರದ ಮೇಲೂ, ಚುನಾಯಿತ ಪ್ರತಿನಿಧಿಗಳ ಮೇಲೂ ನಂಬಿಕೆ ಇರಿಸಿಕೊಳ್ಳಬೇಕು. ಹಾಗಾಗಿ, ಈ ತೀವ್ರ ಪರೀಕ್ಷೆಯಲ್ಲಿ ಪ್ರತಿಯೊಬ್ಬರೂ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು ಎಂದು ಹೇಳಿದ್ದಾರೆ