ಕಾಂಗ್ರೆಸ್‌ ಮತಗಳಿಕೆ ಶೇ. 43.90 – ಬಿಜೆಪಿ ಶೇ.43: ಹಾಗಿದ್ದರೂ ಹಿಮಾಚಲ ಕಾಂಗ್ರೆಸ್‌ ಗೆ ಒಲಿದಿದ್ದು ಹೇಗೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
68 ಸದಸ್ಯ ಬಲದ ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ 40 ಸ್ಥಾನಗಳನ್ನು ಗೆಲ್ಲುವ ಮೂಲಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಅದರ ಪ್ರತಿಪಕ್ಷ ಬಿಜೆಪಿ 25 ಸ್ಥಾನಗಳನ್ನು ಮಾತ್ರ ಗೆಲ್ಲಲು ಸಾಧ್ಯವಾಗಿದೆ. ಆದರೆ ಇಲ್ಲೊಂದು ಗಮನಾರ್ಹ ವಿಚಾರವಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ಮತಹಳಿಕೆ ಪ್ರಮಾಣ 43.90 ಆಗಿದ್ದರೆ ಬಿಜೆಪಿ ಶೇ.43 ರಷ್ಟು ಮತ ಗಳಿಕೆ ಮಾಡಿದೆ. ಅಲ್ಲಿಗೆ ಎರಡೂ ಪಕ್ಷಗಳ ಮತಗಳಿಕೆ ಪ್ರಮಾಣ ಬಹುತೇಕ ಸಮಾನವಾಗಿದೆ!.
ಬಿಜೆಪಿ ಮತ್ತು ಕಾಂಗ್ರೆಸ್ ಎಲ್ಲಾ 68 ಕ್ಷೇತ್ರಗಳಲ್ಲಿ ಸ್ಪರ್ಧಿಸಿದರೆ, ಆಮ್ ಆದ್ಮಿ ಪಕ್ಷ (ಎಎಪಿ) 67 ಸ್ಥಾನಗಳಲ್ಲಿ, ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) 53 ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ-ಮಾರ್ಕ್ಸ್‌ಸ್ಟ್ (ಸಿಪಿಐ-ಎಂ) 11 ಸ್ಥಾನಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು.
ಎಎಪಿ ತನ್ನ ಖಾತೆಯನ್ನು ತೆರೆಯಲು ವಿಫಲವಾಗಿದೆ. ಜೊತೆಗೆ ಸಿಪಿಐ-ಎಂ ಕೂಡ ಯಾವುದೇ ಸ್ಥಾನವನ್ನು ಗೆಲ್ಲಲಿಲ್ಲ ಮತ್ತು ಥಿಯೋಗ್‌ನ ಹಾಲಿ ಶಾಸಕರೂ ಸೋತಿದ್ದಾರೆ. ಮೂವರು ಪಕ್ಷೇತರರು ಗೆಲುವು ಸಾಧಿಸಿದ್ದಾರೆ.
ಎಎಪಿ ಶೇ.1.10, ಸಿಪಿಐ-ಎಂ ಶೇ.0.66, ಬಿಎಸ್‌ಪಿ ಶೇ.0.35, ಮತ್ತು ಸ್ವತಂತ್ರರು ಮತ್ತು ಇತರರು ಶೇ.10.39 ಮತಗಳನ್ನು ಪಡೆದರೆ, ಶೇ.0.59 ನೋಟಾ ಪಾಲಾಗಿದೆ. ಕಾಂಗ್ರೆಸ್‌ – ಬಿಜೆಪಿ ಬಹುತೇಕ ಸಮಾನ ಮತಗಳಿಕೆ ಮಾಡಿದ್ದರೂ ಗೆದ್ದ ಸ್ಥಾನಗಳಲ್ಲಿ ಅಜಗಜಾಂತರ ವ್ಯತ್ಯಾಸವಿರುವುದು ಅಚ್ಚರಿಗೆ ಕಾರಣವಾಗಿದೆ.
ಹಿಮಾಚಲ ಪ್ರದೇಶದಲ್ಲಿ 1985 ರಿಂದ ಆಡಳಿತ ಪಕ್ಷ ಮತ್ತೊಂದು ಅವಧಿಗೆ ಅಧಿಕಾರಕ್ಕೆ ಬಂದ ನಿದರ್ಶನವೇ ಇಲ್ಲ. ಈ ಟ್ರೆಂಡ್ ಅಲ್ಲಿನ ಆಡಳಿತರೂಢ ಬಿಜೆಪಿ ಸರ್ಕಾರಕ್ಕೆ ಮುಳುವಾಗಿದೆ. 43 ರಷ್ಟು ಮತ ಪಾಲನ್ನು ಪಡೆದಿದ್ದರೂ, ಬಿಜೆಪಿ ಹಲವು ಕ್ಷೇತ್ರಗಳಲ್ಲಿ ತೀರಾ ಕಡಿಮೆ ಅಂತರದಲ್ಲಿ ಸೋತಿದೆ. ಹೆಚ್ಚಿನ ಕ್ಷೇತ್ರಗಳಲ್ಲಿ ಮತಗಳಿಕೆ ಪ್ರಮಾಣದಲ್ಲಿ ನಿಶ್ಚಿತತೆಯನ್ನು ಕಾಯ್ದುಕೊಂಡ ಕಾಂಗ್ರೆಸ್‌ ಗೆ ವಿಜಯಲಕ್ಷಿ ಒಲಿದಿದ್ದಾಳೆ.
ಅಲ್ಲಿಗೆ, ಹಿಮಾಚಲ ಮತದಾರ ಬಿಜೆಪಿಯನ್ನು ತಿರಸ್ಕರಿಸಿಲ್ಲ, ʼಗೆಲುವಿನ ಮತಗಳ ಲೆಕ್ಕಾಚಾರʼ ಹಾಗೂ ಅಲ್ಲಿನ ಟ್ರೆಂಡ್‌ ಅಷ್ಟೇ ಬಿಜೆಪಿಗೆ ಸೋಲುಣಿಸಿದೆ ಎಂಬ ವಿಚಾರ ಸ್ಪಷ್ಟವಾಗುತ್ತದೆ.
ಚುನಾವಣಾ ಫಲಿತಾಂಶ ಪ್ರಕಟವಾದ ನಂತರ ದೆಹಲಿಯಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಸಹ ಕಾಂಗ್ರೆಸ್ ಮತ್ತು ಬಿಜೆಪಿ ಮತ ಹಂಚಿಕೆಗಳ ನಡುವಿನ ಶೇಕಡಾ ಒಂದಕ್ಕಿಂತ ಕಡಿಮೆ ಅಂತರವನ್ನು ಎತ್ತಿ ತೋರಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!