ಹೊಸದಿಗಂತ ವರದಿ ಅಂಕೋಲಾ:
ತಾಲೂಕಿನ ಕೇಣಿಯಲ್ಲಿ ವಾಣಿಜ್ಯ ಬಂದರು ನಿರ್ಮಾಣಕ್ಕೆ ಭೂ ವಿಜ್ಞಾನ ಸರ್ವೆ ಕಾರ್ಯ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯ ಮೀನುಗಾರರು ತೀವ್ರ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದು ಬಿಸಿಲಿನ ತಾಪದಲ್ಲಿ ಪ್ರತಿಭಟನೆ ನಡೆಸಿದ ಮೂವರು ಮಹಿಳೆಯರು ತೀವ್ರ ಅಸ್ವಸ್ಥಗೊಂಡ ಕಾರಣ ಆಂಬ್ಯುಲೆನ್ಸ್ ಮೂಲಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೀನುಗಾರ ಮಹಿಳೆಯರು ಸಮುದ್ರದ ನೀರಿನಲ್ಲಿ ಸಹ ಇಳಿದು ಪ್ರತಿಭಟನೆ ನಡೆಸಿದ್ದು ಓರ್ವ ಮಹಿಳೆ ನೀರಿನಲ್ಲಿ ಕುಸಿದು ಬಿದ್ದಿದ್ದು ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತು. ನಂತರ ಬಿಸಿಲಿನ ತಾಪದಲ್ಲಿ ಇನ್ನಿಬ್ಬರು ಮಹಿಳೆಯರು ಅಸ್ವಸ್ಥಗೊಂಡಿದ್ದು ಅವರನ್ನು ಸಹ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.
ಮೀನುಗಾರಿಕೆ ನಡೆಸುವ ಕಡಲ ತೀರದಲ್ಲಿ ಗ್ರೀನ್ ಫೀಲ್ಡ್ ವಾಣಿಜ್ಯ ಬಂದರು ನಿರ್ಮಾಣಕ್ಕೆ ಮೀನುಗಾರರ ವಿರೋಧವಿದ್ದರೂ ಜಿಲ್ಲಾಡಳಿತ ನಿಷೇದಾಜ್ಞೆ ಹೇರುವ ಮೂಲಕ ಸರ್ವೇ ಕಾರ್ಯಕ್ಕೆ ಮುಂದಾಗಿರುವುದು ಸ್ಥಳೀಯ ಮೀನುಗಾರರ ಆಕ್ರೋಶಕ್ಕೆ ಕಾರಣವಾಗಿದೆ.