ಹೊಸದಿಗಂತ ಡಿಜಿಟಲ್ಡೆಸ್ಕ್:
ಕಣಿವೆ ನಾಡಿನಲ್ಲಿ ಇದುವರೆಗೂ ಭಯೋತ್ಪಾದನೆಗೆ 45 ಸಾವಿರಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. ಎಂದು ಗೃಹ ಸಚಿವ ಅಮಿತ್ ಶಾ ಅವರಿಂದು ಲೋಕಸಭೆಗೆ ಈ ಮಾಹಿತಿ ನೀಡಿದರು.
ಜಮ್ಮು ಮತ್ತು ಕಾಶ್ಮೀರ ಪುನರ್ವಿಂಗಡಣೆ (ತಿದ್ದುಪಡಿ) ಮಸೂದೆ ಹಾಗೂ ಜಮ್ಮು ಮತ್ತು ಕಾಶ್ಮೀರ ಮೀಸಲಾತಿ (ತಿದ್ದುಪಡಿ) ಮಸೂದೆಗಳ ಕುರಿತು ಮಾತನಾಡುವ ವೇಳೆ ಜಮ್ಮು ಮತ್ತು ಕಾಶ್ಮೀರದ ವಿಶೇಷ ಕಲಂ 370 ರದ್ಧತಿ ಕುರಿತು ಮಾತನಾಡಿದರು.
ಈ ಕುರಿತು ಮತ್ತೆ ತರುವ ಯಾವುದೇ ಪ್ರಮೇಯವೇ ಬರಲ್ಲ. ಅದು ತಾತ್ಕಾಲಿಕ ವ್ಯವಸ್ಥೆಯಾಗಿತ್ತು. ಎಂದಾದರೂ ಹೋಗಲೇಬೇಕಿತ್ತು. ನಿಮಗೆ (ಪ್ರತಿಪಕ್ಷಗಳು) ಧೈರ್ಯವಿಲ್ಲ. ಪ್ರಧಾನಿ ನರೇಂದ್ರ ಮೋದಿ ಧೈರ್ಯದಿಂದ ಮಾಡಿ ತೋರಿಸಿದರು ಎಂದರು.
ಕಣಿವೆ ನಾಡಿನ ಭಯೋತ್ಪಾದನೆ ಬಗ್ಗೆ ಮಾತನಾಡಿದ ಅಮಿತ್ ಶಾ,ಜಮ್ಮು ಮತ್ತು ಕಾಶ್ಮೀರದಲ್ಲಿ ಇದುವರೆಗೂ ಭಯೋತ್ಪಾದನೆಗೆ 45 ಸಾವಿರಕ್ಕೂ ಅಧಿಕ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇಲ್ಲಿನ ಭಯೋತ್ಪಾದಕ ಘಟನೆಗಳನ್ನು ಶೂನ್ಯಕ್ಕಿಳಿಸುವ ಯೋಜನೆ ಕಳೆದ ಮೂರು ವರ್ಷಗಳಿಂದ ಜಾರಿಯಲ್ಲಿದೆ. 2024ರಲ್ಲೂ ಮೋದಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದು ನಾನು ನಂಬಿದ್ದೇನೆ. ಜಮ್ಮು ಮತ್ತು ಕಾಶ್ಮೀರದಲ್ಲಿ 2026ರ ವೇಳೆಗೆ ಭಯೋತ್ಪಾದನೆ ಘಟನೆಗಳೇ ಇರುವುದಿಲ್ಲ ಎಂಬ ವಿಶ್ವಾಸ ನನಗಿದೆ ಎಂದು ತಿಳಿಸಿದರು.