ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಸರ್ಕಾರವು ಆರಂಭಿಸಿರುವ ಬಿಪಿಎಲ್ ಕಾರ್ಡ್‌ಗಳ ಬೃಹತ್ ಪರಿಷ್ಕರಣೆ ಪ್ರಕ್ರಿಯೆಯು ಅಂತಿಮ ಘಟ್ಟ ತಲುಪಿದ್ದು, ಆಕ್ಷೇಪಣೆಗಳನ್ನು ಸಲ್ಲಿಸಲು ಕೇವಲ ಎರಡು ದಿನಗಳ ಕಾಲಾವಕಾಶ ಮಾತ್ರ ಉಳಿದಿದೆ. ಪರಿಷ್ಕರಣೆ ವೇಳೆ ಬಿಪಿಎಲ್‌ನಿಂದ ಎಪಿಎಲ್‌ಗೆ ವರ್ಗಾವಣೆಯಾಗಿರುವ ಸಾವಿರಾರು ಕಾರ್ಡ್‌ದಾರರು ತಮ್ಮ ಅರ್ಹತೆಯನ್ನು ಸಾಬೀತುಪಡಿಸಲು ದಾಖಲಾತಿಗಳನ್ನು ಸಲ್ಲಿಸುವ ತುರ್ತು ಕೆಲಸದಲ್ಲಿದ್ದಾರೆ. ನಿಗದಿತ ಮಾನದಂಡಗಳ ಅಡಿಯಲ್ಲಿ ಅರ್ಹತೆ ಸಾಬೀತುಪಡಿಸಲು ವಿಫಲವಾದರೆ, ಕಾರ್ಡ್‌ಗಳು ಖಚಿತವಾಗಿ ಎಪಿಎಲ್‌ಗೆ ಶಿಫ್ಟ್ ಆಗಲಿವೆ.
ತೆರಿಗೆ ಪಾವತಿಸದ, ಜಮೀನು ಇಲ್ಲದ, ಸ್ವಂತ ಮನೆಯೂ ಇಲ್ಲದ ಅನೇಕ ಕಾರ್ಡ್‌ದಾರರ ಕಾರ್ಡ್‌ಗಳು ರದ್ದಾಗಿದ್ದವು. ಇದರಿಂದ ಆಕ್ರೋಶಗೊಂಡಿದ್ದ ಬಿಪಿಎಲ್ ಕಾರ್ಡ್‌ದಾರರ ಕೂಗಿಗೆ ಎಚ್ಚೆತ್ತ ಸರ್ಕಾರವು, ತಾವು ಬಿಪಿಎಲ್ ಮಾನದಂಡಗಳ ಒಳಗಿದ್ದೇವೆ ಎಂಬುದನ್ನು ದೃಢಪಡಿಸಲು 45 ದಿನಗಳ ಕಾಲಾವಕಾಶ ನೀಡಿತ್ತು. ಅಕ್ಟೋಬರ್ 30 ರಂದು ಆರಂಭವಾದ ಈ ಪರಿಷ್ಕರಣೆ ಪ್ರಕ್ರಿಯೆ ಇದೀಗ ಮುಕ್ತಾಯದ ಅಂಚಿನಲ್ಲಿದೆ.
ರಾಜ್ಯಾದ್ಯಂತ ಏಳು ಲಕ್ಷಕ್ಕೂ ಹೆಚ್ಚು ಕಾರ್ಡ್‌ಗಳು ಪರಿಷ್ಕರಣೆಗೆ ಒಳಪಟ್ಟಿದ್ದು, ಕಾರ್ಡ್ ಡಿಲೀಟ್ ಆಗಿರುವವರು ನ್ಯಾಯಬೆಲೆ ಅಂಗಡಿಗಳ ಮಾಲೀಕರಿಗೆ ಅಗತ್ಯ ದಾಖಲೆಗಳನ್ನು ಒದಗಿಸಬೇಕು. ನ್ಯಾಯಬೆಲೆ ಅಂಗಡಿಗಳ ಮಾಲೀಕರು ಈ ದಾಖಲಾತಿಗಳನ್ನು ಸಂಗ್ರಹಿಸಿ ಆಹಾರ ಇಲಾಖೆಗೆ ರವಾನೆ ಮಾಡಲಿದ್ದಾರೆ.
ರಾಜ್ಯದಲ್ಲಿ ಬಡತನ ರೇಖೆಗಿಂತ ಮೇಲಿರುವವರಿಗೂ ಹೆಚ್ಚಿನ ಪ್ರಮಾಣದಲ್ಲಿ ಬಿಪಿಎಲ್ ಕಾರ್ಡ್‌ಗಳನ್ನು ವಿತರಿಸಲಾಗಿತ್ತು. ಬಡತನ ಪ್ರಮಾಣ ಕಡಿಮೆ ಇರುವ ಜಿಲ್ಲೆಗಳಲ್ಲಿಯೂ ಶೇಕಡಾ 80ಕ್ಕಿಂತಲೂ ಹೆಚ್ಚು ಬಿಪಿಎಲ್ ಕಾರ್ಡ್‌ಗಳು ಹಂಚಿಕೆಯಾಗಿದ್ದವು. ಬಡವರ ಸಂಖ್ಯೆಗಿಂತ ಹತ್ತಾರು ಪಟ್ಟು ಹೆಚ್ಚು ಕಾರ್ಡ್‌ಗಳ ವಿತರಣೆಯಿಂದಾಗಿ ಸರ್ಕಾರಕ್ಕೆ ಆರ್ಥಿಕ ಹೊಡೆತ ಬೀಳುತ್ತಿತ್ತು. ಅದರಲ್ಲೂ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ ನಂತರ ಆರ್ಥಿಕವಾಗಿ ಕಂಗೆಟ್ಟ ಸರ್ಕಾರವು, ಅನರ್ಹ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಗೊಳಿಸುವ ಮೂಲಕ 25,000 ಕೋಟಿ ಉಳಿತಾಯಕ್ಕೆ ಯೋಜನೆ ರೂಪಿಸಿದೆ. ಇದೇ ಕಾರಣಕ್ಕೆ ಗ್ಯಾರಂಟಿಗಳ ಪರಿಶೀಲನೆ ನೆಪದಲ್ಲಿ ಪಂಚಾಯಿತಿ ಮಟ್ಟದಿಂದ ಅನರ್ಹ ಬಿಪಿಎಲ್ ಕಾರ್ಡ್ ಪತ್ತೆ ಅಭಿಯಾನವನ್ನು ಆಹಾರ ಇಲಾಖೆ ಕೈಗೊಂಡಿದೆ.
ರದ್ದತಿಗೆ ಕಾರಣವಾಗುವ ಪ್ರಮುಖ ಷರತ್ತುಗಳು (ಯಾರು ಅನರ್ಹರು?):
ಕುಟುಂಬದ ವಾರ್ಷಿಕ ಆದಾಯ 1.20 ಲಕ್ಷ ಮೀರಿದ್ದರೆ.
ಆದಾಯ ತೆರಿಗೆ ಪಾವತಿ ಮಾಡುತ್ತಿದ್ದರೆ.
ನಿಗದಿಗಿಂತ ಹೆಚ್ಚಿನ ಪ್ರಮಾಣದ ಜಮೀನು ಹೊಂದಿದ್ದರೆ.
ನಗರ ಪ್ರದೇಶಗಳಲ್ಲಿ 1000 ಚದರ ಅಡಿಗಿಂತ ದೊಡ್ಡ ಪಕ್ಕಾ ಮನೆ ಹೊಂದಿದ್ದರೆ.
ವೈಟ್ ಬೋರ್ಡ್‌ನ (ಖಾಸಗಿ ಬಳಕೆ) 4 ಚಕ್ರದ ವಾಹನವನ್ನು ಹೊಂದಿದ್ದರೆ.
ಮೇಲಿನ ಯಾವುದೇ ಷರತ್ತುಗಳನ್ನು ಉಲ್ಲಂಘಿಸಿ ಬಿಪಿಎಲ್ ಕಾರ್ಡ್ ಮಾಡಿಸಿರುವವರ ಕಾರ್ಡ್‌ಗಳು ರದ್ದಾಗಲಿವೆ.

