ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಗುಜರಾತ್ ನಲ್ಲಿ ಎನ್ಸೆಫಾಲಿಟಿಸ್ ಸಿಂಡ್ರೋಮ್ ನಿಂದ ಕನಿಷ್ಠ 48 ಮಂದಿ ಮೃತಪಟ್ಟಿದ್ದಾರೆ. ಆ ಪೈಕಿ ಹೆಚ್ಚಿನವರ ಸಾವಿಗೆ ಚಾಂದಿಪುರ ವೈರಸ್ ಕಾರಣ ಎಂದು ರಾಜ್ಯ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಗುಜರಾತ್‌ನಲ್ಲಿ ಜುಲೈ 26ರವರೆಗೆ ಒಟ್ಟು 127 ಎಇಎಸ್ (AES) ಪ್ರಕರಣಗಳು ವರದಿಯಾಗಿವೆ. ಈ ಪೈಕಿ 39 ಮಂದಿಗೆ ಚಾಂದಿಪುರ ವೈರಸ್ (CHPV) ಇರುವುದು ದೃಢಪಟ್ಟಿದೆ. ಪಾಸಿಟಿವ್ ಪ್ರಕರಣಗಳನ್ನು ಹೊಂದಿರುವ ಸಬರ್ಕಾಂತ ಮತ್ತು ಪಚ್ಮಹಲ್‌ನಲ್ಲಿ ತಲಾ 6, ಅರಾವಳಿ ಮತ್ತು ಖೇಡಾದಲ್ಲಿ ತಲಾ 3, ಮೆಹ್ಸಾನಾದಲ್ಲಿ 4, ಅಹಮದಾಬಾದ್ ನಗರದಲ್ಲಿ 3 ಮತ್ತು ದಾಹೋಡ್‌ನಲ್ಲಿ 2 ಪ್ರಕರಣಗಳು ವರದಿಯಾಗಿವೆ.
ಜುಲೈ 17ರಂದು ಅರಾವಳಿಯ ಮೋಟಾ ಕಾಂತರಿಯಾ ಎಂಬ ನಾಲ್ಕು ವರ್ಷದ ಮಗು ಸಬರ್ಕಾಂತದ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿತ್ತು. ಇದು ಚಾಂದಿಪುರ ವೈರಸ್‌ನಿಂದ ರಾಜ್ಯದಲ್ಲಿ ಸಂಭವಿಸಿದ ಮೊದಲ ಸಾವಿನ ಪ್ರಕರಣ ಎಂದು ಗುಜರಾತ್ ಸರ್ಕಾರ ದೃಢಪಡಿಸಿತ್ತು. ಮುಖ್ಯವಾಗಿ 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೇಲೆ ಪರಿಣಾಮ ಬೀರುವ ಚಾಂದಿಪುರ ವೈರಸ್ ಸದ್ಯ ಆತಂಕಕ್ಕೆ ಕಾರಣವಾಗಿದೆ.
ಎಇಎಸ್ ಮೆದುಳಿನ ಉರಿಯೂತವನ್ನು ಉಂಟು ಮಾಡುತ್ತದೆ. ಜತೆಗೆ ತೀವ್ರವಾದ ಎನ್ಸೆಫಾಲಿಟಿಕ್ ಕಾಯಿಲೆಗೆ ಕಾರಣವಾಗುತ್ತದೆ. ಇದು ಹರ್ಪಿಸ್ ಸಿಂಪ್ಲೆಕ್ಸ್ ವೈರಸ್, ಎಂಟರೊವೈರಸ್, ಮತ್ತು ಚಾಂದಿಪುರ ವೈರಸ್‌ಗಳಿಂದ ಕಾಣಿಸಿಕೊಳ್ಳುತ್ತದೆ. ಪ್ರಸ್ತುತ ಈ ರೋಗ ಲಕ್ಷಣವಿರುವ 54 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 26 ಮಂದಿ ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ರೋಗ ಲಕ್ಷಣ
ಚಾಂದಿಪುರ ವೈರಸ್ ಸೋಂಕು ಬಾಧಿತರಲ್ಲಿ ಸಾಮಾನ್ಯ ಜ್ವರದ ಲಕ್ಷಣವೇ ಕಂಡು ಬರುತ್ತದೆ. ದಿಢೀರ್ ಜ್ವರ, ತೀವ್ರ ತಲೆನೋವು, ವಾಂತಿ, ಸ್ನಾಯು ಸೆಳೆತ, ಪ್ರಜ್ಞಾಹೀನತೆ, ಅರೆನಿದ್ರಾವಸ್ಥೆ ಕಂಡು ಬರುತ್ತದೆ. ತಕ್ಷಣ ಸೂಕ್ತ ಚಿಕಿತ್ಸೆ ಪಡೆಯದಿದ್ದರೆ ಮಾರಣಾಂತಿಕವಾಗಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.