June 26, 2026
Friday, June 26, 2026
spot_img

5 ಕ್ಯಾರವಾನ್, 50 ಅಸಿಸ್ಟೆಂಟ್ಸ್? ವಿಜಯ್ ದೇವರಕೊಂಡ ವೈರಲ್ ಸ್ಕ್ರೀನ್‌ಶಾಟ್‌ನ ಅಸಲಿ ಕಥೆ ಬಿಚ್ಚಿಟ್ಟ ಚಿತ್ರತಂಡ

ಹೊಸದಿಗಂತ ಡಿಜಿಟಲ್ ಡೆಸ್ಕ್:

ತೆಲುಗು ಸ್ಟಾರ್ ವಿಜಯ್ ದೇವರಕೊಂಡ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ದೊಡ್ಡ ವದಂತಿಗೆ ಅವರ ಅಧಿಕೃತ ಚಿತ್ರತಂಡ ತೆರೆ ಎಳೆದಿದೆ. ‘ರಣಬಾಲಿ’ (Ranabhali) ಚಿತ್ರದ ಶೂಟಿಂಗ್ ವೇಳೆ ವಿಜಯ್ ಭಾರಿ ಬೇಡಿಕೆ ಇಟ್ಟಿದ್ದಾರೆ ಎಂಬ ಸ್ಕ್ರೀನ್‌ಶಾಟ್ ಸಂಪೂರ್ಣ ನಕಲಿ ಎಂದು ನಟನ ಆಪ್ತ ವಲಯ ಸ್ಪಷ್ಟಪಡಿಸಿದೆ. ಖ್ಯಾತ ಸಿನಿ ವೆಬ್‌ಸೈಟ್ ‘123ತೆಲುಗು’ ಹೆಸರಿನಲ್ಲಿ ಸೃಷ್ಟಿಸಲಾಗಿದ್ದ ಈ ಸುಳ್ಳು ವರದಿಯಲ್ಲಿ, ವಿಜಯ್ ಶೂಟಿಂಗ್‌ಗಾಗಿ 5 ಕ್ಯಾರವಾನ್ ಹಾಗೂ 50 ಸಹಾಯಕರನ್ನು ಕೇಳಿದ್ದಾರೆ ಎಂದು ಅಪಪ್ರಚಾರ ಮಾಡಲಾಗಿತ್ತು.

ಕಾನೂನು ಕ್ರಮದ ಎಚ್ಚರಿಕೆ

ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿರುವ ನಟನ ತಂಡ, “ವಿಜಯ್ ದೇವರಕೊಂಡ ಅವರ ಹೆಸರಿಗೆ ಮಸಿ ಬಳಿಯಲು ಎಕ್ಸ್ (ಟ್ವಿಟರ್) ವೇದಿಕೆಯಲ್ಲಿ ಉದ್ದೇಶಪೂರ್ವಕವಾಗಿ ಇಂತಹ ಸುಳ್ಳು ಸುದ್ದಿ ಹರಡಲಾಗುತ್ತಿದೆ. ಇಂತಹ ಆಧಾರರಹಿತ ವದಂತಿಗಳನ್ನು ಯಾರೂ ನಂಬಬೇಡಿ” ಎಂದು ಮನವಿ ಮಾಡಿದೆ. ಇತ್ತ ‘123ತೆಲುಗು’ ಸಂಸ್ಥೆ ಕೂಡ ಸ್ಪಷ್ಟನೆ ನೀಡಿದ್ದು, ತಮ್ಮ ಬ್ರ್ಯಾಂಡ್ ಹೆಸರನ್ನು ದುರುಪಯೋಗಪಡಿಸಿಕೊಂಡ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ.

‘ರಣಬಾಲಿ’ ಚಿತ್ರದಲ್ಲಿ ವಿಜಯ್-ರಶ್ಮಿಕಾ ಜೋಡಿ

ರಾಹುಲ್ ಸಂಕೃತ್ಯನ್ ನಿರ್ದೇಶನದ ‘ರಣಬಾಲಿ’ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮತ್ತೆ ಜೋಡಿಯಾಗಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ವಿವಾಹ ಜೀವನಕ್ಕೆ ಕಾಲಿಟ್ಟಿರುವ ಈ ಲವ್ಲಿ ಜೋಡಿಯನ್ನು ಮತ್ತೊಮ್ಮೆ ಬೆಳ್ಳಿಪರದೆ ಮೇಲೆ ಒಟ್ಟಿಗೆ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !