ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರಾಖಂಡದ ಬಾಗೇಶ್ವರ ಜಿಲ್ಲೆಯಿಂದ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೆ ಸೈನಿಕನ ಮಗು ಮೃತಪಟ್ಟಿದೆ ಎನ್ನಲಾಗಿದೆ.
ಉತ್ತರಾಖಂಡದ ಚಮೋಲಿ ಜಿಲ್ಲೆಯ ಚಿದಂಗಾ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ದಿಢೀರ್ ಅನಾರೋಗ್ಯಕ್ಕೆ (ದೇಹದ ನಿರ್ಜಲೀಕರಣ-ಹೊಟ್ಟೆ ನೋವು) ತುತ್ತಾದ 1 ವರ್ಷದ ಮಗು ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆಯದೆ ಸಾವನ್ನಪ್ಪಿದೆ ಎಂದು ಹೇಳಲಾಗಿದೆ.
ಮೂಲಗಳ ಪ್ರಕಾರ ಚಮೋಲಿ ಜಿಲ್ಲೆಯ ಚಿದಂಗಾ ಗ್ರಾಮದ ನಿವಾಸಿ ಮತ್ತು ಪ್ರಸ್ತುತ ಜಮ್ಮು ಮತ್ತು ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿರುವ ದಿನೇಶ್ ಚಂದ್ರ ಎಂಬ ಸೈನಿಕನ 1 ವರ್ಷದ ಪುಟ್ಟ ಮಗು ಶುಭಾಂಶು ಅನಾರೋಗ್ಯಕ್ಕೆ ತುತ್ತಾಗಿತ್ತು. ಕೂಡಲೇ ಮಗುವನ್ನು ಅದರ ಪೋಷಕರು ಆಸ್ಪತ್ರೆಗೆ ದಾಖಲಿಸಲು ಮುಂದಾದರು.
ಈ ವೇಳೆ ಶುಭಾಂಶುವಿನ ತಾಯಿ ಮತ್ತು ಅಜ್ಜಿ ಮಗುವನ್ನು ಗ್ವಾಲ್ಡಮ್ ಆಸ್ಪತ್ರೆಗೆ ಕರೆದೊಯ್ದರು, ಆದರೆ ಅಲ್ಲಿ ಮಗುವಿಗೆ ಚಿಕಿತ್ಸೆ ಸಿಗಲಿಲ್ಲ. ಇದಾದ ನಂತರ, ಮಗುವನ್ನು ಬೈಜ್ನಾಥ್ ಆಸ್ಪತ್ರೆಗೆ ಮತ್ತು ನಂತರ ಬಾಗೇಶ್ವರಕ್ಕೆ ಉಲ್ಲೇಖಿಸಲಾಯಿತು. ಸಂಜೆ ಮಗುವನ್ನು ಬಾಗೇಶ್ವರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿನ ವೈದ್ಯರು ಕೂಡ ಮಗುವಿನ ಸ್ಥಿತಿ ಗಂಭೀರವಾಗಿದೆ ಎಂದು ಹೇಳಿ ಅಲ್ಮೋರಾ ವೈದ್ಯಕೀಯ ಕಾಲೇಜಿಗೆ ಕಳುಹಿಸಿದರು.
ಅಲ್ಮೋರಾ ವೈದ್ಯಕೀಯ ಕಾಲೇಜನ್ನು ತಲುಪಿದ ನಂತರ, ಶುಭಾಂಶು ಮಗುವನ್ನು ಮತ್ತೆ ಹಲ್ದ್ವಾನಿಯ ಸುಶೀಲಾ ತಿವಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಮಗುವನ್ನು ಪರೀಕ್ಷಿಸಿದ ವೈದ್ಯರು ಮಗು ದಾರಿಯಲ್ಲೇ ಕೊನೆಯುಸಿರೆಳೆದಿದೆ ಎಂದು ಘೋಷಿಸಿದರು. ಹೀಗೆ ಒಂದರ ಬಳಿಕ ಒಂದರಂತೆ 180 ಕಿ.ಮೀ ಸುತ್ತಾಡಿ 5 ಆಸ್ಪತ್ರೆಗಳಿಗೆ ತಿರುಗಿದರೂ ಮಗುವಿಗೆ ಸೂಕ್ತ ಚಿಕಿತ್ಸೆ ದೊರೆಯಲಿಲ್ಲ.
ಇನ್ನು ತಮ್ಮ ಮಗುವಿನ ಸಾವಿಗೆ ಆಸ್ಪತ್ರೆಗಳ ವೈದ್ಯಕೀಯ ನಿರ್ಲಕ್ಷ್ಯವೇ ಕಾರಣ ಎಂದು ಮಗುವಿನ ಪೋಷಕರು ಆರೋಪಿಸಿದ್ದು, ಸೂಕ್ತ ಸಂದರ್ಭದಲ್ಲಿ ಚಿಕಿತ್ಸೆ ಸಿಕ್ಕಿದ್ದರೆ ಮಗು ಬದುಕಿರುತ್ತಿತ್ತು. ಕಳಪೆ ಆರೋಗ್ಯ ಸೇವೆ ಮತ್ತು ಚಿಕಿತ್ಸೆಯ ವಿಳಂಬವು ತನ್ನ ಮಗನ ಜೀವವನ್ನು ಬಲಿ ತೆಗೆದುಕೊಂಡಿದೆ ಎಂದು ತಂದೆ ಸೈನಿಕ ದಿನೇಶ್ ಚಂದ್ರ ಆರೋಪಿಸಿದ್ದಾರೆ.
ಈಗ ಸೈನಿಕ ತಂದೆಯ ಈ ಹೃದಯಸ್ಪರ್ಶಿ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಅವರು ಸರ್ಕಾರಿ ವ್ಯವಸ್ಥೆಯ ನಿರ್ಲಕ್ಷ್ಯದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ. ತಮ್ಮನ್ನು ದೇಶದ ಗಡಿಯಲ್ಲಿ ಇರಿಸಲಾಗಿದೆ, ಆದರೆ ಇಲ್ಲಿ ತಮ್ಮ ಸ್ವಂತ ಮಗನ ಜೀವ ಉಳಿಸಲು ಸಾಧ್ಯವಾಗಲಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.