ಹೊಸದಿಗಂತ ಡಿಜಿಟಲ್ ಡೆಸ್ಕ್:
ಡಂಪರ್ ಮತ್ತು ಟ್ರ್ಯಾಕ್ಟರ್ ಟ್ರಾಲಿ ನಡುವೆ ಭೀಕರ ಡಿಕ್ಕಿ ಸಂಭವಿಸಿದ ಪರಿಣಾಮ ಐವರು ಸಾವು, 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ನಿನ್ನೆ ತಡರಾತ್ರಿ ನಡೆದಿದೆ.
ಇಟಾ ಜಿಲ್ಲೆಯ ಸಕ್ರೌಲಿ ಪೊಲೀಸ್ ಠಾಣೆ ವ್ಯಾಪ್ತಿಯ ಗಧಿಯಾ ಮೌಜ್ಪುರ ಗ್ರಾಮದಿಂದ ಶುಕ್ರವಾರ ರಾತ್ರಿ ಭಕ್ತರಿಂದ ತುಂಬಿದ ಟ್ರ್ಯಾಕ್ಟರ್ ಮಥುರಾ-ವೃಂದಾವನಕ್ಕೆ ತೆರಳುತ್ತಿತ್ತು. ಈ ವೇಳೆ ಸದಾಬಾದ್-ಜಲೇಸರ್ ರಸ್ತೆಯ ಸಹಪೌ ಪ್ರದೇಶದ ನಲ್ಗಾ ಬಳಿ ಈ ದುರಂತ ಸಂಭವಿಸಿದೆ.
ಅಪಘಾತದಲ್ಲಿ ವಾಹನಗಳು ಡಿಕ್ಕಿಯಾದ ರಭಸಕ್ಕೆ ಟ್ರ್ಯಾಕ್ಟರ್ ಟ್ರಾಲಿ ಪಲ್ಟಿಯಾಗಿದೆ. ಘಟನೆಯಲ್ಲಿ ಐವರು ಸಾವನ್ನಪ್ಪಿದ್ದು, 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕೂಡಲೇ ಆಗ್ರಾ ಮತ್ತು ಅಲಿಗಢ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಗಾಯಗೊಂಡವರಲ್ಲಿ ಹಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.