ಹೊಸದಿಗಂತ ಡಿಜಿಟಲ್ ಡೆಸ್ಕ್:
ರಷ್ಯಾದ ಕಮ್ಚಟ್ಕಾ ಪ್ರಾಂತ್ಯದಲ್ಲಿ ಕೇವಲ ಒಂದು ಗಂಟೆ ಅವಧಿಯಲ್ಲಿ ಐದು ಪ್ರಬಲ ಭೂಕಂಪಗಳು ಸಂಭವಿಸಿರುವ ಹಿನ್ನೆಲೆ, ಯುನೈಟೆಡ್ ಸ್ಟೇಟ್ಸ್ ಸುನಾಮಿ ಎಚ್ಚರಿಕೆ ಕೇಂದ್ರವು ರಷ್ಯಾ ಹಾಗೂ ಹವಾಯಿಯ ಕೆಲವು ಭಾಗಗಳಿಗೆ ಸುನಾಮಿ ಎಚ್ಚರಿಕೆ ನೀಡಿದೆ.
ಭಾನುವಾರ ಬೆಳಗಿನ ಜಾವ ಈ ಭೂಕಂಪಗಳು ಸಂಭವಿಸಿದ್ದು, ಎಲ್ಲ ಭೂಕಂಪಗಳ ತೀವ್ರತೆಯು 6.6 ರಿಂದ 7.4 ಮ್ಯಾಗ್ನಿಟ್ಯೂಡ್ ನಡುವೆ ಸಂಭವಿಸಿದೆ. ಜರ್ಮನ್ ಭೂವೈಜ್ಞಾನಿಕ ಸಂಸ್ಥೆ (GFZ) 6.7 ತೀವ್ರತೆಯ ಭೂಕಂಪವನ್ನು ದಾಖಲಿಸಿದ್ದು, ಯುಎಸ್‌ಜಿಎಸ್ ಮತ್ತು ಇಎಂಎಸ್ಸಿ 7.4 ತೀವ್ರತೆಯ ಭೂಕಂಪದ ವರದಿಯನ್ನು ನೀಡಿವೆ.
ಯುಎಸ್ ಜಿಯೋಲಾಜಿಕಲ್ ಸರ್ವೆಯ ಪ್ರಕಾರ, ಈ ಎಲ್ಲಾ ಐದು ಭೂಕಂಪಗಳೂ ಭೂಮಿಯ ಮೇಲ್ಮೈಯಿಂದ ಸುಮಾರು 10 ಕಿಲೋಮೀಟರ್ ಆಳದಲ್ಲಿ ಸಂಭವಿಸಿವೆ. ಭೂಕಂಪಗಳು ಸಂಭವಿಸಿದ ಸ್ಥಳ ಪೆಟ್ರೋಪಾವ್ಲೋವ್ಸ್ಕ್-ಕಾಮ್ಚಾಟ್ಸ್ಕಿಯಿಂದ 130ರಿಂದ 151 ಕಿಲೋಮೀಟರ್ ಪೂರ್ವಕ್ಕೆ ನೆಲೆಗೊಂಡಿದೆ.
ಇದೀಗ ಪ್ರವಾಸಿಗರು ಹಾಗೂ ಸಮುದ್ರ ತೀರದ ನಿವಾಸಿಗಳಿಗೆ ಎಚ್ಚರಿಕೆ ನೀಡಲಾಗಿದೆ. ಅಧಿಕಾರಿಗಳು ಪರಿಸ್ಥಿತಿಯ ಮೇಲ್ವಿಚಾರಣೆಯನ್ನು ತೀವ್ರಗೊಳಿಸಿದ್ದು, ಈಗಷ್ಟೆ ಯಾವುದೇ ಸಾವು-ನೋವು ಅಥವಾ ಆಸ್ತಿಯ ನಾಶದ ಮಾಹಿತಿ ಲಭ್ಯವಾಗಿಲ್ಲ. ಸುನಾಮಿಯ ಭೀತಿಯಿಂದ ಹವಾಯಿ ದ್ವೀಪಕ್ಕೂ ಕೂಡ ಎಚ್ಚರಿಕೆ ನೀಡಲಾಗಿದೆ. ಸಮುದ್ರ ಮಟ್ಟದ ಏರಿಕೆ ಕುರಿತು ವೈಜ್ಞಾನಿಕ ತಂಡಗಳು ನಿಗಾ ವಹಿಸುತ್ತಿವೆ.