ಹೊಸದಿಗಂತ ವರದಿ, ಕಾರವಾರ:
ಕಾಳಿ ನದಿ ಜಲಾಯನ ಪ್ರದೇಶದಲ್ಲಿ ವ್ಯಾಪಕ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವುದರಿಂದ ಜಲಾಶಯದಲ್ಲಿ ನೀರಿನ ಮಟ್ಟ ಏರತೊಡಗಿದ್ದು ನೀರಿನ ಹರಿವು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕದ್ರಾ ಜಲಾಶಯದಿಂದ 5 ಸಾವಿರ ಕ್ಯೂಸೆಕ್ ನೀರು ಹೊರಬಿಡಲಾಗಿದೆ.
ಜಲಾಶಯದ ಗರಿಷ್ಠ ಮಟ್ಟ 34.5 ಮೀಟರ್ ಇದ್ದು ಜಿಲ್ಲಾಡಳಿತದಿಂದ ನಿಗದಿಪಡಿಸಲಾದ 31 ಮೀಟರಿಗೆ ತಲುಪಿರುವುದರಿಂದ ನೀರು ಹೊರ ಬಿಡಲು ಕ್ರಮ ಕೈಗೊಳ್ಳಲಾಗಿದೆ.
ಜಲಾಶಯದ ಎರಡು ಗೇಟುಗಳಿಂದ ನೀರನ್ನು ಹೊರಬಿಡಲಾಗಿದ್ದು ನೀರಿನ ಒಳ ಹರಿವು ಹೆಚ್ಚುತ್ತಿರುವ ಕಾರಣ ನದಿಪಾತ್ರದ ಜನರ ಸುರಕ್ಷತೆ ದೃಷ್ಟಿಯಿಂದ ಬೇರೆ ಕಡೆ ಸ್ಥಳಾಂತರಿಸಲು ಜಿಲ್ಲಾಡಳಿತದಿಂದ ಸೂಚಿಸಲಾಗಿದೆ.
ಜಿಲ್ಲೆಯ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ವ್ಯಾಪಕ ಪ್ರಮಾಣದಲ್ಲಿ ಮಳೆ ಮುಂದುವರಿದಿದೆ.
ಅಂಕೋಲಾ ತಾಲೂಕಿನಲ್ಲಿ ಗಂಗಾವಳಿ ನದಿ ತುಂಬಿ ಹರಿಯುತ್ತಿದ್ದು ಯಾವುದೇ ರೀತಿಯ ಪ್ರವಾಹದ ಸಾಧ್ಯತೆಗಳು ಕಂಡು ಬಂದಿಲ್ಲ ಎಂದು ತಹಶೀಲ್ಧಾರ ಪ್ರವೀಣ ಹುಚ್ಚಣ್ಣನವರ್ ತಿಳಿಸಿದ್ದಾರೆ.