ಹೊಸದಿಗಂತ ವರದಿ,ವಿಜಯಪುರ:
ಬಿಜೆಪಿ ಸರ್ಕಾರವಿದ್ದಾಗ ಕಾಂಗ್ರೆಸ್‌ನವರಿಗೆ ಕೇವಲ 5 ಕೋಟಿ ರೂ. ಕೊಟ್ಟಿದ್ದರು. ಆದರೆ ನಮ್ಮ ಸರ್ಕಾರ ಕಾಂಗ್ರೆಸ್ ಶಾಸಕರಿಗೆ ನೀಡುತ್ತಿರುವ ಶೇ. 50 ರಷ್ಟು ಅನುದಾನವನ್ನು ನೀಡುತ್ತಿದೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಕಾಂಗ್ರೆಸ್ ಶಾಸಕರಿಗೆ 50 ಕೋಟಿ ಅನುದಾನ, ಬಿಜೆಪಿ, ಜೆಡಿಎಸ್ ಶಾಸಕರಿಗೆ 25 ಕೋಟಿ ರೂ. ಅನುದಾನ ನೀಡುತ್ತಿರುವ ಕುರಿತು ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ಬಿಜೆಪಿಗರು ಈ ಹಿಂದೆ ನನಗೆ 5 ಕೋಟಿ ಕೊಟ್ಟಿದ್ದರು. ನಾವು ಅವರಿಗೆ ಹೆಚ್ಚಿಗೆ ಕೊಟ್ಟಿದ್ದೇವೆ ಎಂದರು.
ಧರ್ಮಸ್ಥಳದಲ್ಲಿನ ಸರಣಿ ಕೊಲೆಗಳ ಪ್ರಕರಣ ಎಸ್‌ಐಟಿಗೆ ನೀಡಿರುವ ಕುರಿತಾದ ಪರ, ವಿರೋಧ ಚರ್ಚೆ ಬಗ್ಗೆ ಪ್ರತಿಕ್ರಿಯಿಸಿ, ಈ ರೀತಿ ಸ್ವಾಭಾವಿಕವಾಗಿ ಆಗುತ್ತದೆ. ಒಂದು ಪ್ರಕರಣವನ್ನು ಯಾರೂ ಸಾಂರ್ಧಭಿಕವಾಗಿ ನೋಡಲು ಬರುವುದಿಲ್ಲ. ಏನೋ ಒಳ್ಳೆಯದು ಮಾಡಲಿಕ್ಕೆ ಹೋದರೆ, ಯಾವುದೇ ಒಂದು ಆಯಾಮದಲ್ಲಿ ಹೀಗೆ ಮಾಡುತ್ತಾರೆ. ಪೊಲೀಸರ ತನಿಖೆಗೆ ಅವಕಾಶ ಕೊಡಿ. ಸಮಯ ಬೇಕಾಗುತ್ತದೆ. ತನಿಖೆಯಿಂದ ಸತ್ಯಾಂಶ ಹೊರ ಬರಲಿದೆ ಎಂದರು.
ಸಿಎಂ, ಡಿಸಿಎಂ ಮಧ್ಯೆ ಮುಸುಕಿನ ಗುದ್ದಾಟ ವಿಚಾರಕ್ಕೆ ಪ್ರತಿಕ್ರಿಯಿಸಿ, ಅದು ಮುಗಿದ ಹೋದ ವಿಚಾರ. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರಲ್ಲ. ಮುಸುಕಿನ ಗುದ್ದಾಟ ಪ್ರಶ್ನೆಯೆ ಬರೋದಿಲ್ಲ ಎಂದರು.
ಕೆಪಿಸಿಸಿ ರಾಜ್ಯಾಧ್ಯಕ್ಷ ಬದಲಾವಣೆ ವಿಚಾರಕ್ಕೆ, ಅದು ನಮ್ಮ ಹಂತದಲ್ಲಿ ಇಲ್ಲ. ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಟೈಂ ಬಂದಾಗ ಅಧ್ಯಕ್ಷ ಸ್ಥಾನ ಬದಲಾವಣೆ ಮಾಡುತ್ತಾರೆ. ಸೂಕ್ತ ಸಮಯದಲ್ಲಿ ವರಿಷ್ಠರು ನಿರ್ಧಾರ ಮಾಡುತ್ತಾರೆ. ಇದನ್ನ ನಾವು ಹೇಳೋಕೆ ಆಗಲ್ಲ. ಕಾದು ನೋಡೋಣ ಎಂದರು.
ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಬದಲಾವಣೆ ಕೂಗಿನ ವಿಚಾರಕ್ಕೆ, ಏನೇ ಇದ್ದರೂ ಹೈಕಮಾಂಡ್ ನಿರ್ಧಾರ ಮಾಡಬೇಕು. ಮುಖ್ಯಮಂತ್ರಿ ಈಗಾಗಲೇ ನಾನೇ 5 ವರ್ಷ ಇರ್ತಿನಿ ಎಂದಿದ್ದಾರೆ. ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ ಎಂದು ಸ್ವತಃ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹೇಳಿದ್ದಾರೆ. ಅವರೇ ಹೊಂದಾಣಿಕೆ ಆಗಿದ್ದಾರೆ, ನಾವೇನು ಹೇಳೋದು ಇದೆ ಎಂದರು.
ಸತೀಶ್ ಜಾರಕಿಹೊಳಿ ಅಭಿಮಾನಿಗಳಿಂದ ಮುಖ್ಯಮಂತ್ರಿ ಘೋಷಣೆ ವಿಚಾರಕ್ಕೆ, ಅದೆಲ್ಲ ಏನೀಲ್ಲ. ಆ ಆಸೆಯನ್ನು ಯಾವತ್ತೂ ವ್ಯಕ್ತಪಡಿಸಿಯೇ ಇಲ್ಲ. ನಾನು ವೈಯಕ್ತಿಕ ಕೆಲಸದ ಮೇಲೆ ದೆಹಲಿಗೆ ಹೋಗುತ್ತೇನೆ. ನಮ್ಮ ಇಲಾಖೆ ಕೆಲಸದ ಮೇಲೆ ಹೊಗಬೇಕಾಗುತ್ತದೆ. ಅದಕ್ಕೂ ರಾಜಕೀಯಕ್ಕೂ ಸಂಬಂಧವಿಲ್ಲ ಎಂದರು.