July 8, 2026
Wednesday, July 8, 2026
spot_img

500 ಕೋಟಿ ಡೀಲ್ ಕೇವಲ 250 ಕೋಟಿಗೆ ಫೈನಲ್! ‘ರಾಮಾಯಣ’ ಸಿನಿಮಾ ವಿತರಣೆಯಲ್ಲಿ ಕರಣ್ ಕಮಾಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಿತೇಶ್ ತಿವಾರಿ ನಿರ್ದೇಶನದ, ಭಾರತೀಯ ಚಿತ್ರರಂಗದ ಅತ್ಯಂತ ಪ್ರತಿಷ್ಠಿತ ಹಾಗೂ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾದ ಮೊದಲ ಭಾಗವು ಈ ವರ್ಷದ ದೀಪಾವಳಿ ಹಬ್ಬದ ಶುಭ ಸಂದರ್ಭದಲ್ಲಿ ವಿಶ್ವಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಬರೋಬ್ಬರಿ 4,000 ಕೋಟಿ ರೂಪಾಯಿಗಳ ಬೃಹತ್ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವು ಭಾರತೀಯ ಸಿನೆಮಾ ಇತಿಹಾಸದಲ್ಲೇ ಅತ್ಯಂತ ದುಬಾರಿ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

250 ಕೋಟಿಗೆ ಡೀಲ್ ಕುದುರಿಸಿದ ಕರಣ್ ಜೋಹರ್

ಬಾಲಿವುಡ್‌ನ ಖ್ಯಾತ ನಿರ್ಮಾಪಕ ಕರಣ್ ಜೋಹರ್ ಒಡೆತನದ ‘ಧರ್ಮ ಪ್ರೊಡಕ್ಷನ್ಸ್’, ಈ ದೃಶ್ಯ ಕಾವ್ಯದ ಭಾರತದ ವಿತರಣಾ ಹಕ್ಕನ್ನು ತನ್ನದಾಗಿಸಿಕೊಂಡಿದೆ. ಆರಂಭದಲ್ಲಿ ಈ ಹಕ್ಕುಗಳಿಗಾಗಿ 500 ಕೋಟಿ ರೂಪಾಯಿಗಳ ಭಾರಿ ಬೇಡಿಕೆ ಇಡಲಾಗಿತ್ತು. ಆದರೆ, ಅಂತಿಮ ಸುತ್ತಿನ ಮಾತುಕತೆಗಳ ನಂತರ ಕೇವಲ 250 ಕೋಟಿ ರೂಪಾಯಿಗಳಿಗೆ ಈ ಒಪ್ಪಂದ ಮುಕ್ತಾಯಗೊಂಡಿದೆ. ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರು ಚಿತ್ರದ 30 ನಿಮಿಷಗಳ ವಿಶೇಷ ಎಡಿಟೆಡ್ ಝಲಕ್ ತೋರಿಸಿದ ಬಳಿಕ ಈ ಡೀಲ್ ಅಧಿಕೃತಗೊಂಡಿದೆ.

ಧರ್ಮ ಪ್ರೊಡಕ್ಷನ್ಸ್ ಸಂಸ್ಥೆಯ ಆರ್ಥಿಕ ಬಲ

ಸೀರಮ್ ಇನ್‌ಸ್ಟಿಟ್ಯೂಟ್‌ನ ಆದರ್ ಪೂನಾವಾಲಾ ಅವರು ಧರ್ಮ ಪ್ರೊಡಕ್ಷನ್ಸ್‌ನ ಶೇಕಡಾ 50 ರಷ್ಟು ಪಾಲನ್ನು 1,000 ಕೋಟಿ ರೂಪಾಯಿಗೆ ಖರೀದಿಸಿದ ನಂತರ ಸಂಸ್ಥೆಯ ಮಾರುಕಟ್ಟೆ ಮೌಲ್ಯ ಹೆಚ್ಚಾಗಿದೆ. ಈ ಹಿಂದೆ ‘ಬಾಹುಬಲಿ’, ‘2.0’ ಮತ್ತು ‘ದೇವರ’ ನಂತಹ ದಕ್ಷಿಣದ ಪ್ಯಾನ್-ಇಂಡಿಯಾ ಬ್ಲಾಕ್‌ಬಸ್ಟರ್ ಚಿತ್ರಗಳನ್ನು ಉತ್ತರ ಭಾರತದಲ್ಲಿ ಯಶಸ್ವಿಯಾಗಿ ವಿತರಣೆ ಮಾಡಿದ ಭಾರಿ ಅನುಭವ ಧರ್ಮ ಪ್ರೊಡಕ್ಷನ್ಸ್‌ಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !