ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾಡಿನ ಎಲ್ಲಾ ಕನ್ನಡಿಗರಿಗೆ 68ನೇ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ವಿಶಾಲ ʻಮೈಸೂರು ರಾಜ್ಯ, ಕರ್ನಾಟಕʼ ಎಂದು ನಾಮಕರಣಗೊಂಡು ಇಂದಿಗೆ 50ವರ್ಷ. ಇಂದು ನಾಡಿನಾದ್ಯಂತ ಕನ್ನಡ ರಾಜ್ಯೋತ್ಸವ ಹಬ್ಬವನ್ನು ಅತ್ಯಂತ ಸಂಭ್ರಮ-ಸಡಗರದಿಂದ ಆಚರಿಸಲಾಗುತ್ತಿದೆ. ರಾಜ್ಯದ ಎಲ್ಲಾ ಜಿಲ್ಲಾಡಳಿತಗಳೂ ಕನ್ನಡ ಹಬ್ಬವನ್ನು ಅದ್ದೂರಿಯಾಗಿ ಆಚರಿಸುತ್ತಿವೆ.
ಪ್ರತಿಯೊಂದು ಸರಕಾರಿ ಕಚೇರಿಯಲ್ಲೂ ಕನ್ನಡದ ಬಾವುಟ ರಾರಾಜಿಸಲಿದೆ. ಪ್ರತಿಯೊಂದು ನಗರ, ಪಟ್ಟಣದ ಬೀದಿಬೀದಿಗಳಲ್ಲೂ ಕನ್ನಡದ ಕಂಪಿನ ಪರಿಮಳ ಬೀರುತ್ತಿದ್ದು, ಹಲವು ನಗರಗಳು ದೀಪಾಲಂಕಾರ, ಬಣ್ಣದ ಚಿತ್ತಾರಗಳೊಂದಿಗೆ ಸಿಂಗಾರಗೊಂಡಿವೆ. ಬೆಳಗಾವಿಯಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವ ಆಚರಿಸಲು ಜಿಲ್ಲಾಡಳಿತ ಸಕಲ ವ್ಯವಸ್ಥೆ ಮಾಡಿಕೊಂಡಿದೆ. ಮಹಾರಾಷ್ಟ್ರದ ಸಂಸದರು, ಸಚಿವರು ಗಡಿ ಪ್ರವೇಶಿಸದಂತೆ ಈಗಾಗಲೇ ಆದೇಶ ಹೊರಡಿಸಲಾಗಿದೆ.
ಈ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ರಾಜ್ಯಾದ್ಯಂತ ವೈವಿಧ್ಯಮಯವಾಗಿ, ವರ್ಣಮಯವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಇದಕ್ಕೊಂದು ವಿಶೇಷ ಮೆರುಗು ನೀಡುವ ಉದ್ದೇಶದಿಂದ ಐದು ಹಾಡುಗಳನ್ನು ಹಾಡುವ ಮೂಲಕ ಕನ್ನಡಾಂಬೆಗೆ ನುಡಿ ನಮನ ಸಲ್ಲಿಸಲು ರಾಜ್ಯ ಸರಕಾರ ಮನವಿ ಮಾಡಿದೆ.
- ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು
- ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ
- ಎಲ್ಲಾದರೂ ಇರು ಎಂತಾದರೂ ಇರು
- ಒಂದೇ ಒಂದೇ ಕರ್ನಾಟಕ ಒಂದೇ
- ಹೊತ್ತಿತೋ ಹೊತ್ತಿತು ಕನ್ನಡದ ದೀಪ