ಹೊಸದಿಗಂತ, ಬೀದರ್:
ಔರಾದ(ಬಿ) ತಾಲ್ಲೂಕಿನ ಬಳತ್(ಬಿ) ಹತ್ತಿರ ಹಾಲಹಳ್ಳಿ ಬ್ಯಾರೇಜ್ ಮೇಲ್ಭಾಗದಲ್ಲಿ ಮಾಂಜ್ರಾ ನದಿಯಿಂದ 0.95 ಟಿಎಂಸಿ ನೀರನೆತ್ತಿ 36 ಕೆರೆಗಳಿಗೆ ನೀರು ತುಂಬಿಸುವ 560 ಕೋಟಿಯ ಕಾಮಗಾರಿಗೆ ಸರ್ಕಾರದಿಂದ ಅನುಮೋದನೆ ಸಿಕ್ಕಿದ್ದು, ಆರ್ಥಿಕ ಬಿಡ್ ಗೆ ಅನುಮೋದನೆ ದೊರೆತ್ತಿದ್ದು, ಕಾಮಗಾರಿ ಪ್ರಾರಂಭಿಸಲು ಕ್ರಮ ವಹಿಸಲಾಗುವುದೆಂದು ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ ಮಾಹಿತಿ ನೀಡಿದ್ದಾರೆ.
ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ಅಧಿವೇಶನದಲ್ಲಿ ಕೇಳಿದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉಪಮುಖ್ಯಮಂತ್ರಿ ಉತ್ತರಿಸಿದ್ದಾರೆ.
ಒಟ್ಟು 560.70 ಕೋಟಿ ಮೊತ್ತದ ಪ್ರಸ್ತಾವನೆಗೆ ಮೊದಲನೇ ಹಂತದಲ್ಲಿ 300 ಕೋಟಿ ಹಾಗೂ ಎರಡನೇ ಹಂತದಲ್ಲಿ 260.70 ಕೋಟಿ ಮೊತ್ತದಲ್ಲಿ ಕೈಗೊಳ್ಳಲು ಹಾಗೂ ಮೊದಲನೇ ಹಂತದಲ್ಲಿ 300 ಕೋಟಿ ಮೊತ್ತದ ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ಕೈಗೊಳ್ಳಲು 2023ರ ಜನವರಿ 10ರಂದು ಸರ್ಕಾರ ಅನುಮೋದನೆ ನೀಡಿತ್ತು. ಅದರನ್ವಯ ಮೊದಲನೇ ಹಂತದ ಕಾಮಗಾರಿಗಳಿಗೆ ನಿಗಮದ ನಿರ್ದೇಶಕರ ಮಂಡಳಿಯ ಸಭೆಯಲ್ಲಿ ಆರ್ಥಿಕ ಬಿಡ್ ಗೆ ಅನುಮೋದನೆ ನೀಡಿದ್ದು ಕಾಮಗಾರಿ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದೆಂದು ಮಾಹಿತಿ ನೀಡಿದ್ದಾರೆ.
ಈ ಯೋಜನೆಯಿಂದ 30 ಸಣ್ಣ ನೀರಾವರಿ ಕೆರೆಗಳು ಹಾಗೂ 6 ಇಂಗು ಕೆರೆಗಳಿಗೆ ನೀರು ತುಂಬಿಸಲಾಗುತ್ತದೆ. ಸದರಿ ಯೋಜನೆಯಿಂದ 8188 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸಂಪರ್ಕ ಕಲ್ಪಿಸಬಹುದಾಗಿದೆ. ಪ್ರತಿ ವರ್ಷ ಕ್ಷೇತ್ರದಲ್ಲಿ ಎದುರಾಗುವ ನೀರಿನ ಕೊರತೆಯನ್ನು ತಪ್ಪಿಸಲು ಮತ್ತು ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಹಿಂದೆ ಸಚಿವನಾಗಿದ್ದಾಗ ನಾನು ಸಾಕಷ್ಟು ಪ್ರಯತ್ನ ವಹಿಸಿ 560.70 ಕೋಟಿ ಮೊತ್ತದ ಪ್ರಸ್ತಾವನೆಗೆ ಮಂಜೂರಾತಿ ಪಡೆದಿದ್ದೇನೆ. ಇದೀಗ ಆರ್ಥಿಕ ಬಿಡ್ ಗೆ ಅನುಮೋದನೆ ದೊರೆತಿದೆ. ಟೆಂಡರ್ ಮಾಡಿ ಬೇಗ ಕಾಮಗಾರಿ ಆರಂಭಿಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸಲಾಗಿದೆ ಎಂದು ಶಾಸಕರು ಹೇಳಿದ್ದಾರೆ.