ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಕಿಮ್ಯಾನ್ ಖ್ಯಾತಿಯ ಚಿತ್ರದುರ್ಗದ ಜ್ಯೋತಿ ರಾಜ್ ರಾಮನಗರ ಜಿಲ್ಲೆಯ 560 ಮೀ. ಎತ್ತರವಿರುವ ಹಂದಿಗೊಂದಿ ಬೆಟ್ಟವನ್ನು ಹತ್ತಿದ್ದಕ್ಕೆ ಜಿಲ್ಲಾ ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿ ಕರೆದೊಯ್ದಿದ್ದಾರೆ.
ರಾಮನಗರ ಜಿಲ್ಲೆಯಲ್ಲಿರುವ ಹಂದಿಗುಂದಿ ಬೆಟ್ಟವನ್ನು ಹತ್ತುವುದಕ್ಕೆ ಚಿತ್ರದುರ್ಗದಿಂದ ಬಂದು ಅರಣ್ಯ ಇಲಾಖೆಯಿಂದ ಅನುಮತಿ ಕೇಳಿದ್ದಾರೆ. ಆದರೆ, ಅರಣ್ಯ ಇಲಾಖೆಯ ಯಾವುದೇ ಅಧಿಕಾರಿಗಳು ಈತನ ಒಂದು ಮಾತನ್ನೂ ಕಿವಿಯ ಮೇಲೆ ಹಾಕಿಕೊಂಡಿಲ್ಲ. ಒಂದು ವಾರಗಳ ಕಾಲ ವಿವಿಧ ಅಧಿಕಾರಿಗಳ ಬಳಿ ಮನವಿ ಮಾಡಿಕೊಂಡರೂ ಅರಣ್ಯ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದಾರೆ. ಈಗ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ರಾಜಕೀಯ ಪ್ರತಿನಿಧಿಗಳೂ ಇವರಿಗೆ ಸಿಕ್ಕಿಲ್ಲ. ಆದ್ದರಿಂದ ಬೆಟ್ಟ ಹತ್ತಲು ಅನುಮತಿಗಾಗಿ ಒಂದು ವಾರ ಕಾದರೂ ಅನುಮತಿ ಸಿಗದೇ ಹೈರಾಣಾಗಿದ್ದರು.
ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬೇಸತ್ತ ಜ್ಯೋತಿರಾಜ್ ಗುರುವಾರ ಬೆಳಗ್ಗೆ ಸುಮಾರು 560 ಮೀ. ಎತ್ತರವಿರುವ ಹಂದಿಗುಂದಿ ಬೆಟ್ಟವನ್ನು ಹತ್ತಲು ಆರಂಭಿಸಿದ್ದಾರೆ. ಆಗ, ಯಾರೋ ಚಾರಣ ಮಾಡುತ್ತಿದ್ದಾರೆಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಆಗ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು ಆತನನ್ನು ಬೆಟ್ಟ ಹತ್ತಲೂ ಬಿಡದೇ ಆತನ ಮೊಬೈಲ್‌ಗೆ ಕರೆ ಮಾಡಿದ್ದಾರೆ. ಆದರೆ, ಮುಕ್ಕಾಲುಭಾಗ ಬೆಟ್ಟ ಹತ್ತಿದ ನಂತರ ಇಳಿಯುವುದಕ್ಕೆ ಆಗುವುದಿಲ್ಲವೆಂದು ಜ್ಯೋತಿರಾಜ್ ಪೂರ್ಣ ಬೆಟ್ಟವನ್ನು ಹತ್ತಿ ತನ್ನ ಗುರಿಯನ್ನು ಸಾಧಿಸಿದ್ದಾನೆ. ನಂತರ, ಆತನನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿ ಕರೆದುಕೊಂಡು ಹೋಗಿದ್ದಾರೆ.
ಅರಣ್ಯ ಇಲಾಖೆ ಅನುಮತಿ ಪಡೆಯದೇ ಬೆಟ್ಟ ಹತ್ತಿದ್ದರಿಂದ ನಿನ್ನ ಮೇಲೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿ ಜೈಲಿಗೆ ಕಳಿಸುತ್ತೇವೆ ಎಂದು ಎಚ್ಚರಿಕೆಯನ್ನೂ ನೀಡಿದ್ದಾರಂತೆ. ಈ ಎಲ್ಲ ವಿವರವನ್ನು ಜ್ಯೋತಿರಾಜ್ ತನ್ನ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಹಂಚಿಕೊಂಡಿದ್ದಾರೆ. ಜ್ಯೋತಿರಾಜ್ ಅವರ ಅಭಿಮಾನಿಗಳು ಹಾಗೂ ಫಾಲೋವರ್ಸ್‌ಗಳು ನಾವು ನಿಮ್ಮ ಬೆಂಬಲಕ್ಕಿದ್ದೇವೆ ಎಂದು ಭರವಸೆ ನೀಡಿದ್ದಾರೆ. ಒಂದು ವೇಳೆ ಅರಣ್ಯಾಧಿಕಾರಿಗಳು ಆತನನ್ನು ಜೈಲಿಗೆ ಕಳಿಸಿದರೆ ಮುಂದೇನು ಗತಿ ಎಂಬ ಆತಂಕ ಎದುರಾಗಿದೆ. ರಕ್ಷಣೆಗೆ ಮುಂದಾಗಬೇಕು ಎಂದು ಸಾಮಾಜಿಕ ಜಾಲತಾಣದ ಮೂಲಕ ಅವಲತ್ತುಕೊಂಡಿದ್ದಾರೆ.
Instead of encouraging him, the system has arrested Mr.Jyothiraj, he has approached several times for permission.