ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಇದ್ದಕ್ಕಿದ್ದಂತೆಯೇ ವಾತಾವರಣದಲ್ಲಿ ಭಾರೀ ಬದಲಾವಣೆಗಳು ಕಾಣಿಸಿದ್ದು, ಹಾವುಗಳ ಕಾಟವೂ ಹೆಚ್ಚಾಗಿದೆ. ಒಂದೇ ವಾರದಲ್ಲಿ ರಾಜ್ಯದಲ್ಲಿ 702 ಮಂದಿ ಹಾವು ಕಡಿತಕ್ಕೆ ಒಳಗಾಗಿದ್ದಾರೆ. ಒಟ್ಟಾರೆ ಹಾವು ಕಚ್ಚಿದ್ದರಿಂದ ಆರು ಮಂದಿ ಮೃತಪಟ್ಟಿದ್ದಾರೆ.
ಬೆಂಗಳೂರಿನಲ್ಲಿಯೂ ಮನೆಗಳ ಸುತ್ತಮುತ್ತ, ಮನೆಯೊಳಗೆ, ಬಾತ್ರೂಮ್ನಲ್ಲಿ, ಚಪ್ಪಲಿಗಳ ಒಳಗೆ ಹಾವುಗಳು ಕಾಣಿಸಿಕೊಂಡಿದ್ದು, ಜನರಲ್ಲಿ ಆತಂಕ ಹೆಚ್ಚಾಗಿದೆ. ಮಕ್ಕಳಿರುವ ಮನೆಯವರು ತೀವ್ರ ಆತಂಕಕ್ಕೆ ಒಳಗಾಗಿದ್ದು, ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಬೆಂಗಳೂರಿನ ಹಲವು ಭಾಗಗಳಲ್ಲಿ ಮೂರು ದಿನಗಳಿಂದ ಭಾರೀ ಬಿಸಿಲಿನ ವಾತಾವರಣವಿದೆ. ಈ ಪ್ರದೇಶಗಳಲ್ಲಿ ಧಗೆ ತಾಳಲಾರದೆ ಹಾವುಗಳು ಹೊರಗೆ ಬರುತ್ತಿವೆ. ವಿದ್ಯಾರಣ್ಯಪುರ, ನಾಗರಭಾವಿ, ಆರ್.ಆರ್. ನಗರ, ಯಲಹಂಕ, ಜೆ.ಪಿ. ನಗರ ಮತ್ತು ಸರ್ಜಾಪುರ ಸೇರಿದಂತೆ ನಗರದಲ್ಲಿ ವೇಗವಾಗಿ ಅಭಿವೃದ್ಧಿಯಾಗುತ್ತಿರುವ ಪ್ರದೇಶಗಳಲ್ಲಿ ಹಾವುಗಳ ಆವಾಸಸ್ಥಾನಗಳು ನಾಶವಾಗುತ್ತಿವೆ. ಕಾಂಕ್ರೀಟ್ ಕಟ್ಟಡಗಳು ಮತ್ತು ಅಭಿವೃದ್ಧಿ ಕಾರ್ಯಗಳಿಂದ ಅವುಗಳ ವಾಸಸ್ಥಾನಕ್ಕೆ ಧಕ್ಕೆಯಾಗಿದ್ದು, ಹಾವುಗಳು ಮನೆಗಳತ್ತ ಬರುತ್ತಿವೆ.
ಈಗಾಗಲೇ ಬಿಬಿಎಂಪಿ ಸಹಾಯವಾಣಿ ಹಾಗೂ ಅಗ್ನಿಶಾಮಕ ದಳದ ಸಹಾಯವಾಣಿಗೆ ಹಾವುಗಳು ಇರುವ ಬಗ್ಗೆ ಕರೆ ಬರುತ್ತಿದೆ. ಮೂರು ದಿನಗಳಲ್ಲಿ 200ಕ್ಕೂ ಹೆಚ್ಚು ಕರೆಗಳು ಬಂದಿವೆ ಎಂದು ತಿಳಿದುಬಂದಿದೆ. ನಾಗರಹಾವು, ಕೊಳಕು ಮಂಡಲ, ಕೆರೆ ಹಾವು ಹಾಗೂ ಕಟ್ಟು ಹಾವುಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಮನೆಗಳಲ್ಲಿ ಹಾವು ಕಾಣಿಸಿದ ನಂತರ ಉರಗ ಸಂರಕ್ಷಕರು ಸ್ಥಳಕ್ಕೆ ತೆರಳಿ ಅವುಗಳನ್ನು ರಕ್ಷಿಸುತ್ತಿದ್ದಾರೆ. ಆದರೆ ಒಂದೇ ಸಮಕ್ಕೆ ಹತ್ತಾರು ಕಡೆಗಳಿಂದ ಕರೆ ಬರುವ ಕಾರಣ ಅವರಿಗೂ ಒತ್ತಡವಾಗುತ್ತಿದೆ.
ಯಾವುದೇ ಕಾರಣಕ್ಕೂ ಸ್ವತಃ ಹಾವುಗಳನ್ನು ಹಿಡಿಯಲು ಹೋಗಬೇಡಿ. ರೀಲ್ಸ್ ಮಾಡುವ ಗೀಳಿಗೆ ಬೀಳಬೇಡಿ. ಯಾರಾದರೂ ಹಿಡಿಯಲು ಬರುವವರೆಗೂ ದೂರದಲ್ಲಿಯೇ ಇದ್ದು ಹಾವಿನ ಮೇಲೆ ಕಣ್ಣಿಡಿ ಎಂದು ಉರಗ ತಜ್ಞರು ಹೇಳಿದ್ದಾರೆ.



