ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್‌ನ ಹಿರಿಯ ನಟ ಧರ್ಮೇಂದ್ರ ಅವರು ಇಂದು ಕೊನೆಯುಸಿರೆಳೆದಿದ್ದಾರೆ. ವಯೋಸಹಜ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರಿಂದು ಇಹಲೋಕ ತ್ಯಜಿಸಿದ್ದಾರೆ.
ಕೆಲ ದಿನಗಳ ಹಿಂದೆ ಅವರನ್ನು ರೆಗ್ಯುಲರ್ ಚೆಕ್ ಅಪ್ಗಾಗಿ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯ ಸ್ಥಿತಿ ಬಿಗಡಾಯಿಸಿದ ಕಾರಣ ವೆಂಟಿಲೇಟರ್ ಬೆಂಬಲದೊಂದಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆ ಕಠಿಣ ಸಂದರ್ಭ ಪತ್ನಿ ಹೇಮಾ ಮಾಲಿನಿ, ಪುತ್ರರಾದ ಸನ್ನಿ ಡಿಯೋಲ್, ಬಾಬಿ ಡಿಯೋಲ್ ಸೇರಿದಂತೆ ಕುಟುಂಬ ಸದಸ್ಯರು ಉಪಸ್ಥಿತರಿದ್ದರು. ನಂತರ ಮನೆಯಲ್ಲಿಯೇ ಚಿಕಿತ್ಸೆ ಮುಂದುವರಿಸಲು ಕುಟುಂಬ ನಿರ್ಧರಿಸಿತು. ಅದರಂತೆ ಅವರನ್ನು ನವೆಂಬರ್ 12ರಂದು ಡಿಸ್ಚಾರ್ಜ್ ಮಾಡಿಸಿ ಮನೆಗೆ ಕರೆದೊಯ್ಯಲಾಗಿತ್ತು. ನಿವಾಸದಲ್ಲೇ ಸಂಪೂರ್ಣ ಚಿಕಿತ್ಸೆ ನಡೆಯುತ್ತಿತ್ತು.ಆದ್ರೀಗ ಹಿರಿಯ ನಟನ ನಿಧನ ಸಿನಿಮಾ ಜಗತ್ತಿಗೆ ಮತ್ತು ದೇಶಾದ್ಯಂತದ ಅಭಿಮಾನಿಗಳಿಗೆ ತೀವ್ರ ದುಃಖ ಉಂಟುಮಾಡಿದೆ. ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಸಂತಾಪ ವ್ಯಕ್ತವಾಗುತ್ತಿದೆ.
ಧರ್ಮೇಂದ್ರ ಸಿನಿಮಾ ಜರ್ನಿ:
ಧರ್ಮೇಂದ್ರ ಅವರು 1935ರಲ್ಲಿ ಪಂಜಾಬ್‌ನಲ್ಲಿ ಜನಿಸಿದರು. 1960ರಲ್ಲಿ ದಿಲ್ ಭಿ ತೇರಾ ಹಮ್ ಭಿ ತೇರೆ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು. ಹಿಂದಿ ಚಿತ್ರರಂಗದಲ್ಲಿ ಅತ್ಯಂತ ಪ್ರೀತಿಪಾತ್ರ ಮತ್ತು ಬಹುಮುಖ ತಾರೆಯಾಗಿ ಸ್ಥಾನಮಾನ ಗಿಟ್ಟಿಸಿಕೊಂಡರು. ಆ್ಯಕ್ಷನ್, ರೊಮ್ಯಾನ್ಸ್, ಕಾಮಿಡಿ ಸೇರಿ ಎಲ್ಲಾ ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಧರ್ಮೇಂದ್ರ ಕೊನೆಯ ಬಾರಿಗೆ 2024ರಲ್ಲಿ ‘ತೇರಿ ಬಾತೋ ಮೇ ಐಸಾ ಉಲ್ಜಾ ಜಿಯಾ’ ಚಿತ್ರದಲ್ಲಿ ಕಾಣಿಸಿಕೊಂಡರು. ಈ ಚಿತ್ರದಲ್ಲಿ ನಟರಾದ ಶಾಹಿದ್ ಕಪೂರ್ ಮತ್ತು ಕೃತಿ ಸನೋನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಹಿರಿಯ ನಟ ಮುಂದೆ ಖ್ಯಾತ ನಿರ್ದೇಶಕ ಶ್ರೀರಾಮ್ ರಾಘವನ್ ನಿರ್ದೇಶನದ ‘ಇಕ್ಕಿಸ್’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದರು. ಸಿನಿಮಾ ಬಿಡುಗಡೆಗೆ ಇನ್ನೇನು ಕೆಲವೇ ದಿನಗಳಿವೆ ಅನ್ನೋ ಸಂದರ್ಭದಲ್ಲಿ ನಟ ಇಹಲೋಕ ತ್ಯಜಿಸಿದ್ದಾರೆ.
1960ರ ದಶಕದಲ್ಲಿ ರೊಮ್ಯಾಂಟಿಂಕ್ ಫಿಲ್ಮ್ ‘ಆಯೇ ದಿನ್ ಬಾಹರ್ ಕೆ’ ಮತ್ತು ಆಯೇ ಮಿಲನ್ ಕಿ ಬೇಲಾದಿಂದ ಹಿಡಿದು ಆ್ಯಕ್ಷನ್ – ಪ್ಯಾಕ್ಡ್ ಫೂಲ್ ಔರ್ ಪತ್ತರ್ ವರೆಗೆ, ಧರ್ಮೇಂದ್ರ ಸತತ ಬಾಕ್ಸ್ ಆಫೀಸ್ ಹಿಟ್‌ಗಳನ್ನು ನೀಡಿದ್ದಾರೆ.
1970 ಮತ್ತು 1980ರ ದಶಕದಲ್ಲಿ ಶೋಲೆ, ಸೀತಾ ಔರ್ ಗೀತಾ, ರಾಜಾ ಜಾನಿ, ಚುಪ್ಕೆ ಚುಪ್ಕೆ, ಪ್ರತಿಗ್ಯ, ಜುಗ್ನು ಮತ್ತು ಧರಮ್ ವೀರ್ನಂತಹ ಚಿತ್ರಗಳಲ್ಲಿನ ಅಮೋಘ ಅಭಿನಯದೊಂದಿಗೆ ಜನಮನ ಸೆಳೆದರು. ಶೋಲೆಯಲ್ಲಿನ ವೀರು ಪಾತ್ರವು ಬಾಲಿವುಡ್ ಸಿನಿಮಾ ಇತಿಹಾಸದಲ್ಲಿ ಇದುವರೆಗೆ ನಿರ್ವಹಿಸಿದ ಅತ್ಯಂತ ಅಪ್ರತಿಮ ಪಾತ್ರಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ.
ಭಾರತೀಯ ಸಿನಿಮಾ ಇತಿಹಾಸದಲ್ಲೇ ಅತ್ಯಂತ ಶ್ರೇಷ್ಠ, ಅತ್ಯಂತ ಸುಂದರ ಮತ್ತು ಕಮರ್ಷಿಯಲ್ ಆಗಿಯೂ ಅತ್ಯಂತ ಯಶಸ್ವಿ ಸಿನಿಮಾ ನಟರಲ್ಲಿ ಒಬ್ಬರೆಂದು ವ್ಯಾಪಕವಾಗಿ ಪರಿಗಣಿಸಲ್ಪಟ್ಟ ಧರ್ಮೇಂದ್ರ, 6 ದಶಕಗಳಿಗೂ ಹೆಚ್ಚು ಕಾಲ ಸಿನಿಮಾ ರಂಗದಲ್ಲಿ ತೊಡಗಿಸಿಕೊಂಡಿದ್ದರು. 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡಿ ಭಾರತೀಯರ ಹೃದಯದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

