ಹೊಸದಿಗಂತ ವರದಿ, ಬೀದರ್:
ಭಾಲ್ಕಿ ತಾಲ್ಲೂಕಿನ ಮರೂರ್ ಹತ್ತಿರ ತುಂಬಿ ಹರಿಯುತ್ತಿರುವ ಕಾರಂಜಾ ಜಲಾಶಯದ ಎಡದಂಡೆ ಕಾಲುವೆಗೆ ಜಿಗಿದು ಒಂದೇ ಕುಟುಂಬದ ಆರು ಮಂದಿ ಆತ್ಮಹತ್ಯೆಗೆ ಯತ್ನಿಸಿದ್ದು, ನಾಲ್ವರು ಮೃತಪಟ್ಟರೆ ಇನ್ನಿಬ್ಬರು ಬದುಕಿಳಿದಿರುವ ಘಟನೆ ಮಂಗಳವಾರ ಸಂಜೆ ನಡೆದಿದೆ.
ಬೀದರ್ ನಗರದ ಮೈಲೂರು ನಿವಾಸಿಗಳಾದ ಶಿವಮೂರ್ತಿ(45), ಮಕ್ಕಳಾದ ಶ್ರೀಶಾಂತ (8), ಹೃತಿಕ್ (4) ಹಾಗೂ ರಾಕೇಶ್ ( 7 ತಿಂಗಳು) ಮೃತ ದುರ್ವೈವಿಗಳು. ಶಿವಮೂರ್ತಿಯ ಪತ್ನಿ ರಮಾಬಾಯಿ (42) ಹಾಗೂ ಪುತ್ರ ಶ್ರೀಕಾಂತ (7) ಅವರನ್ನು ಸ್ಥಳೀಯರು ರಕ್ಷಿಸಿದ್ದಾರೆ. ಇವರಲ್ಲರೂ ಬೀದರಿನಿಂದ ಮರೂರ ಹತ್ತಿರವಿರುವ ದರ್ಗಾಕ್ಕೆ ತೆರಳಿದ್ದರು ಎನ್ನಲಾಗಿದೆ. ಈ ವೇಳೆ ಸಮೀಪದ ಕಾರಂಜಾ ಕಾಲುವೆಗೆ ಜಿಗಿದಿದ್ದಾರೆ. ನೀರಿನ ರಭಸದಲ್ಲಿ ನಾಲ್ವರು ಕೊಚ್ಚಿಹೋಗಿ ಸಾವನ್ನಪ್ಪಿದರೆ, ಇಬ್ಬರು ಬದುಕಿಳಿದಿದ್ದಾರೆ. ಸಾಲಬಾಧೆ, ಕೌಟುಂಬಿಕ ಸಮಸ್ಯೆ ಆತ್ಮಹತ್ಯೆಗೆ ಕಾರಣ ಎಂದು ಶಂಕಿಸಲಾಗುತ್ತಿದೆ. ನಾಲ್ಕೂ ಮೃತದೇಹಗಳನ್ನು ನಾಲೆಯಿಂದ ಹೊರತೆಗೆಯಲಾಗಿದೆ. ಪ್ರಕರಣ ದಾಖಲಿಸಿಕೊಂಡ ಧನ್ನೂರ ಠಾಣೆ ಪೊಲೀಸರು ತನಿಖೆ ನಡೆಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಆತ್ಮಹತ್ಯೆಗೆ ನಿಖರ ಕಾರಣ ಪತ್ತೆ ಹಚ್ಚಲು ಹಾಗೂ ಕುಟುಂಬದವರಿಗೆ ಅಗತ್ಯ ನೆರವು ಒದಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.