April 14, 2026
Tuesday, April 14, 2026
spot_img

ಆಲೂರು ಕ್ರಾಸ್ ಬಳಿ ಭೀಕರ ಅಪಘಾತ: ನಿಯಂತ್ರಣ ತಪ್ಪಿ ಮರಕ್ಕೆ ಕಾರು ಡಿಕ್ಕಿ, ಮೂವರ ಸ್ಥಿತಿ ಗಂಭೀರ

ಹೊಸದಿಗಂತ ದಾಂಡೇಲಿ:

ಹಳಿಯಾಳ-ದಾಂಡೇಲಿ ರಾಜ್ಯ ಹೆದ್ದಾರಿಯ ಆಲೂರು ಕ್ರಾಸ್ ಬಳಿ ಬುಧವಾರ ಸಂಜೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ವೇಗವಾಗಿ ಬಂದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೂವರು ವ್ಯಕ್ತಿಗಳು ಗಾಯಗೊಂಡಿದ್ದಾರೆ.

ದಾಂಡೇಲಿಯಿಂದ ಹಳಿಯಾಳದ ಕಡೆಗೆ ಪ್ರಯಾಣಿಸುತ್ತಿದ್ದ KA 30, M 4111 ನೋಂದಣಿ ಸಂಖ್ಯೆಯ ಕಾರು ಆಲೂರು ಕ್ರಾಸ್ ಸಮೀಪಿಸುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿದೆ. ಈ ವೇಳೆ ಕಾರು ನೇರವಾಗಿ ರಸ್ತೆ ಪಕ್ಕದ ಮರಕ್ಕೆ ಗುದ್ದಿದೆ.

ಅಪಘಾತದಲ್ಲಿ ಕಾರಿನಲ್ಲಿದ್ದ ಈ ಕೆಳಗಿನ ವ್ಯಕ್ತಿಗಳು ಗಾಯಗೊಂಡಿದ್ದಾರೆ:

ಶಿವಯ್ಯ ಫಕೀರಯ್ಯ ತೇರಗಾವಿ (ಶಿವಪುರ, ಹಳಿಯಾಳ ತಾಲೂಕು)

ಸತ್ಯ ಕುಮಾರ್ ಸುಭಾಷ್ ಕುಮಾರ್ ಕಮ್ಮಾರ್ (ಮುರ್ಕವಾಡ, ಹಳಿಯಾಳ ತಾಲೂಕು)

ವಿಠ್ಠಲ ಮಹಾದೇವಪ್ಪ ದರ್ಗದ್ (ಶಿವಪುರ ಗ್ರಾಮ)

ಗಾಯಗೊಂಡವರನ್ನು ತಕ್ಷಣವೇ ದಾಂಡೇಲಿಯ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಶಿವಯ್ಯ ತೇರಗಾವಿ ಮತ್ತು ಸತ್ಯ ಕುಮಾರ್ ಅವರ ಸ್ಥಿತಿ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಧಾರವಾಡದ ಆಸ್ಪತ್ರೆಗೆ ರವಾನಿಸಲಾಗಿದೆ. ವಿಠ್ಠಲ ದರ್ಗದ್ ಅವರು ದಾಂಡೇಲಿಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನಾ ಸ್ಥಳಕ್ಕೆ ದಾಂಡೇಲಿ ಗ್ರಾಮೀಣ ಠಾಣೆಯ ಪಿಎಸ್ಐಗಳಾದ ಶಿವಾನಂದ ನಾವದಗಿ ಮತ್ತು ಜಗದೀಶ ನಾಯ್ಕ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !