ಹೊಸದಿಗಂತ ಡಿಜಿಟಲ್ ಡೆಸ್ಕ್:
2026-27ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಒಂದನೇ ತರಗತಿಗೆ ದಾಖಲಾಗುವ ಮಕ್ಕಳಿಗೆ 60 ದಿನಗಳ ವಯೋಮಿತಿ ಸಡಿಲಿಕೆ ನೀಡಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
ಸ್ವಪ್ರೇರಣೆಯಿಂದ ಹೇಳಿಕೆ ನೀಡಿದ ಅವರು, ಪ್ರತಿ ವರ್ಷವು ವಯೋಮಿತಿ ಸಡಿಲಿಕೆಗೆ ಪೋಷಕರಿಂದ ಬೇಡಿಕೆಗಳು ಬರುತ್ತಿವೆ. ಇದನ್ನು ಖಾಯಂ ಆಗಿ ವಯೋಮಿತಿ ಸಡಿಲಿಕೆ ಮಾಡಲು ಮುಂದಿನ ಅಧಿವೇಶನದಲ್ಲಿ ಅಗತ್ಯ ಕಾನೂನು ತಿದ್ದುಪಡಿ ತರುವುದಾಗಿ ಹೇಳಿದರು.
ಜೊತೆಯಲ್ಲಿ ಎಲ್ ಕೆಜಿ, ಯುಕೆಜಿ, ಪ್ರಾಥಮಿಕ ಪೂರ್ವ ತರಗತಿಗಳ ಪ್ರವೇಶಕ್ಕೆ ವಯೋಮಿತಿ ಕ್ರಮಬದ್ಧತೆಗೊಳಿಸುವ ಬಗ್ಗೆಯೂ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಈ ಬಗ್ಗೆ ಶಾಶ್ವತವಾದ ಅಧಿಸೂಚನೆ ಹೊರಡಿಸುವಂತೆ ವಿಧಾನಸಭೆಯ ವಿರೋಧ ಪಕ್ಷದ ಉಪ ನಾಯಕ ಅರವಿಂದ್ ಬೆಲ್ಲದ್ ಸಲಹೆ ನೀಡಿದರು.
ಈ ಬಗ್ಗೆ ಪರಿಶೀಲಿಸುವುದಾಗಿ ಸಚಿವರು ಭರವಸೆ ನೀಡಿದರು.
ನಂತರ ಪ್ರಶ್ನೋತ್ತರ ಅವಧಿಯಲ್ಲಿ ಅನುದಾನಿತ ಶಾಲೆಗಳಿಗೆ ಶಿಕ್ಷಕರ ನೇಮಕಾತಿಗೆ ಅವಕಾಶ ಮಾಡಿಕೊಡಬೇಕೆಂದು ಶಾಸಕ ಟಿ. ರಘುಮೂರ್ತಿ ಒತ್ತಾಯಿಸಿದಾಗ, ಬಹುತೇಕ ಅನುದಾನಿತ ಶಾಲೆಗಳು ಕನ್ನಡ ಮಾಧ್ಯಮದಲ್ಲಿದೆ. ಶಿಕ್ಷಕರ ಕೊರತೆಯಿದ್ದಲ್ಲಿ , ಬೋಧನೆಯ ಗುಣಮಟ್ಟ ಕುಗ್ಗುತ್ತದೆ. ಹೀಗಾಗಿ ಶಾಲಾ ಶಿಕ್ಷಕರು ಅಥವಾ ಅತಿಥಿ ಶಿಕ್ಷಕರ ನೇಮಕಕ್ಕೆ ಅನುಮತಿಯ ಅಗತ್ಯವಿದೆ ಎಂದು ಹೇಳಿದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿನ ಶಾಲೆಗಳಿಗೆ ಮೂಲಭೂತ ಸೌಲಭ್ಯ ಹಾಗೂ ಬೋಧಕ ಸಿಬ್ಬಂದಿಗಳನ್ನು ಕಲ್ಪಿಸುವ ಬಗ್ಗೆ ಶಾಸಕ ಹಂಪನಗೌಡ ಬಾದರ್ಲಿ ಗಮನ ಸೆಳೆದಾಗ, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನ ಬಳಕೆ ಮಾಡಿಕೊಂಡು ಶಾಲಾ ಶಿಕ್ಷಕರನ್ನು ಭರ್ತಿ ಮಾಡಿಕೊಳ್ಳುವುದಾದರೆ ನಮ್ಮ ಅಭ್ಯಂತರವಿಲ್ಲ ಎಂದರು. ಆದರೆ, ನಿಯಮಗಳಲ್ಲಿ ಇದಕ್ಕೆ ಅವಕಾಶವಿಲ್ಲ. ಶಾಸಕರು ಮತ್ತು ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ಅನುದಾನಿತ ಶಾಲೆಗಳ ಮೂಲಸೌಲಭ್ಯ ಅಭಿವೃದ್ಧಿಗೆ ಹಣಕಾಸು ನೆರವು ನೀಡಲು ಅವಕಾಶವಿದೆ ಎಂದು ಸಚಿವರಾದ ಶರಣಪ್ರಕಾಶ್ ಪಾಟೀಲ್, ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದರು.



