ವಿಶ್ವದಲ್ಲಿ ಬಳಕೆಯಾಗುವ 60% ಲಸಿಕೆ ಭಾರತದಿಂದಲೇ ಪೂರೈಕೆಯಾಗುತ್ತಿದೆ: ವಿತ್ತಸಚಿವೆ ನಿರ್ಮಲಾ ಸೀತಾರಾಮನ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ವಿಶ್ವದ ಬೇಡಿಕೆಯ ಸುಮಾರು 60% ಅನ್ನು ಭಾರತವು ಪೂರೈಕೆ ಮಾಡುತ್ತಿದ್ದು ಲಸಿಕೆ ಉತ್ಪಾದನೆಯಲ್ಲಿ ಭಾರತವು ದಶಕಗಳಿಂದ ಗಮನಾರ್ಹ ಕೊಡುಗೆಯನ್ನು ನೀಡಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ. ಪುಸ್ತಕ ಬಿಡುಗಡೆ ಸಮಾರಂಭವೊಂದರಲ್ಲಿ ಮಾತನಾಡಿದ ಅವರು ವಿಶ್ವಕ್ಕೆ ಸರಬರಾಜಾಗುತ್ತಿರುವ ಲಸಿಕೆಗಳ ಉತ್ಪಾದನೆ ವಿಷಯದಲ್ಲಿ ಭಾರತವು ಬಹುದೊಡ್ಡ ಕೊಡುಗೆ ಹೊಂದಿದೆ ಎಂದಿದ್ಧಾರೆ.

ಜಗತ್ತಿಗೆ ಭಾರತವು ಹೇಗೆ ರೋಗನಿರೋಧಕತೆಯನ್ನು ನೀಡಿದೆ ಎಂಬುದನ್ನು ವಿವರಿಸಿದ ನಿರ್ಮಲಾ ಸೀತಾರಾಮನ್‌ ಅವರು “ದಶಕಗಳಲ್ಲಿ ಭಾರತವು ಗಮನಾರ್ಹ ಕೊಡುಗೆಯನ್ನು ನೀಡಿದೆ, ಪ್ರಪಂಚದಲ್ಲಿ ಬಳಸಲಾಗುವ ಎಲ್ಲಾ ಲಸಿಕೆಗಳಲ್ಲಿ ಸುಮಾರು 60% ರಷ್ಟು ಭಾರತದಲ್ಲಿ ಉತ್ಪಾದಿಸಲಾಗುತ್ತದೆ. ವಿಶ್ವಕ್ಕೆ ಸರಬರಾಜಾಗುತ್ತಿರುವ ಲಸಿಕೆಗಳಲ್ಲಿ ಭಾರತವು ಬಹುದೊಡ್ಡ ಕೊಡುಗೆ ನೀಡುತ್ತಿದೆ. ಸಾರ್ವಜನಿಕ ಜೀವನಕ್ಕೆ ರಕ್ಷೆಯೊದಗಿಸಲು ಏನನ್ನಾದರೂ ನಿರ್ಮಿಸಬೇಕೆನ್ನುವುದು ಬಾರತೀಯರ ಡಿಎನ್‌ಎ ಯಲ್ಲಿದೆ. ಹೀಗಾಗಿಯೇ ಕೋವಿಡ್‌ ಲಾಕ್‌ ಡೌನ್‌ ಸಂದರ್ಭದಲ್ಲಿಯೂ ಅನೇಕರ ಜೀವವುಳಿಸಿದ ಲಸಿಕೆಯನ್ನು ನಾವು ಕಂಡು ಹಿಡಿಯಲು ಸಾಧ್ಯವಾಯಿತು” ಎಂದಿದ್ದಾರೆ.

ಇನ್ನು ನಾಗರಿಕರಿಗೆ ಎರಡೆರಡು ಬಾರಿ ಲಸಿಕೆ ಹಾಕಿರುವ ಪ್ರಯತ್ನವನ್ನು ಶ್ಲಾಘಿಸಿ “ಎರಡು ಬಾರಿ ಲಸಿಕೆ ಹಾಕುವ ಪ್ರಯತ್ನವನ್ನು ಕಾರ್ಯಗತಗೊಳಿಸುವುದು ಸುಲಭದ ಮಾತಲ್ಲ. ಅಷ್ಟೊಂದು ಪ್ರಮಾಣದಲ್ಲಿ ಅದನ್ನು ಉತ್ಪಾದಿಸುವುದೂ ಸುಲಭವಲ್ಲ” ಎಂದು ಉಲ್ಲೇಖಿಸಿದ್ದಾರೆ.

ಹಣಕಾಸು ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಸಜ್ಜನ್ ಸಿಂಗ್ ಯಾದವ್ ಅವರ ‘ಭಾರತದ ಲಸಿಕೆ ಬೆಳವಣಿಗೆಯ ಕಥೆ – ಕೌಪಾಕ್ಸ್‌ನಿಂದ ಲಸಿಕೆ ಮೈತ್ರಿಯವರೆಗೆ’ ಎಂಬ ಶೀರ್ಷಿಕೆಯ ಪುಸ್ತಕದ ಬಿಡುಗಡೆ ಸಂದರ್ಭದಲ್ಲಿ ಅವರು ಮಾತನಾಡುತ್ತಿದ್ದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!