ದೇಶಕ್ಕಾಗಿ 62 ವರ್ಷಗಳ ಸುದೀರ್ಘ ಸೇವೆ: ಇತಿಹಾಸದ ಪುಟದತ್ತ IAF ಮಿಗ್ 21 ಫೈಟರ್ ಜೆಟ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್;

ಸುಮಾರು ಅರವತ್ತು ವರ್ಷಗಳ ಕಾಲ ದೇಶದ ಸೇವೆಯನ್ನು ಮಾಡಿದ್ದ ಭಾರತೀಯ ವಾಯುಸೇನೆಯ ಮಿಗ್ 21 ಫೈಟರ್ ಜೆಟ್ ವಿಮಾನಕ್ಕೆ ವಿದಾಯ ಹೇಳುವ ದಿನ ಹತ್ತಿರವಾಗುತ್ತಿದೆ.

ಸೆಪ್ಟೆಂಬರ್ 19 ರಂದು ಭಾರತೀಯ ವಾಯುಪಡೆ (IAF) ತನ್ನ ಅತ್ಯಂತ ಹಳೆಯ ಮತ್ತು ಐತಿಹಾಸಿಕ ಯುದ್ಧ ವಿಮಾನ MiG-21 ಗೆ ವಿದಾಯ ಹೇಳಲಿದೆ. 23 ಸ್ಕ್ವಾಡ್ರನ್ (ಪ್ಯಾಂಥರ್ಸ್) ಚಂಡೀಗಢ ವಾಯುನೆಲೆಯಲ್ಲಿ ನಡೆಯುವ ವಿಶೇಷ ಸಮಾರಂಭದಲ್ಲಿ ಈ ವಿಮಾನಕ್ಕೆ ವಿದಾಯ ಹೇಳಲಿದೆ. 1963 ರಲ್ಲಿ ಮೊದಲ ಬಾರಿಗೆ ಸೇರ್ಪಡೆಯಾದ MiG-21, ಭಾರತದ ಮೊದಲ ಸೂಪರ್ಸಾನಿಕ್ ಜೆಟ್ ಆಗಿದ್ದು, ಇದು 62 ವರ್ಷಗಳ ಕಾಲ ದೇಶದ ವಾಯುಬಲವನ್ನು ಬಲಪಡಿಸಿತ್ತು.

ಮಿಗ್ ಫೈಟರ್ ಅನ್ನು ಹಿಂದಕ್ಕೆ ತೆಗೆದುಕೊಳ್ಳುವ ನಿರ್ಧಾರದಿಂದ ಭಾರತದ ವಾಯುಪಡೆಯ ಯುದ್ದವಿಮಾನಗಳ ಸಂಖ್ಯೆ 29ಕ್ಕೆ ಇಳಿಯಲಿದೆ. ಮಿಗ್ 21 ವಿಮಾನಕ್ಕೆ ಹಾರುವ ಶವಪೆಟ್ಟಿಗೆ ಎನ್ನುವ ಅಪಖ್ಯಾತಿಯೂ ಇದೆ. ಇತ್ತೀಚಿನ ದಿನಗಳಲ್ಲಿ ಸತತವಾಗಿ ಅಪಘಾತ ಸಂಭವಿಸುತ್ತಿತ್ತು.

1963ರಲ್ಲಿ ಭಾರತೀಯ ವಾಯುಸೇನೆಗೆ ಸೇರ್ಪಡೆಗೊಂಡ ಈ ವಿಮಾನವು, 1965ರ ಭಾರತ ಮತ್ತು ಪಾಕಿಸ್ತಾನ ಯುದ್ದ, 1971ರ ಬಾಂಗ್ಲಾ ವಿಮೋಚನೆ ಸಂಘರ್ಷ, 1999ರ ಕಾರ್ಗಿಲ್ ಯುದ್ದ ಮತ್ತು 2019ರ ಬಾಲಾಕೋಟ್ ವಾಯುದಾಳಿಗೂ ಮಿಗ್ 21 ವಿಮಾನವನ್ನು ಬಳಸಿಕೊಳ್ಳಲಾಗಿತ್ತು.ಆಪರೇಷನ್ ಸಿಂದೂರ್ ಕಾರ್ಯಾಚರಣೆಯ ವೇಳೆಯೂ, ಈ ವಿಮಾನವನ್ನು ಸೀಮಿತವಾಗಿ ಬಳಸಿಕೊಳ್ಳಲಾಗಿತ್ತು. ಈ ವಿಮಾನ, ಭಾರತೀಯ ವಾಯುಪಡೆಯಲ್ಲಿ ದೀರ್ಘಾವಧಿಗೆ ಸೇವೆ ಸಲ್ಲಿಸಿದ ವಿಮಾನ ಎನ್ನುವ ಹೆಗ್ಗಳಿಕೆಗೂ ಪಾತ್ರವಾಗಿದೆ.

23 ಸ್ಕ್ವಾಡ್ರನ್‌ ಭಾಗವಾಗಿರುವ ಮಿಗ್ 21 ಯುದ್ದ ವಿಮಾನವನ್ನು ಚಂಡೀಗಢದ ವಾಯುನೆಲೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬೀಳ್ಕೊಡಲಾಗುವುದು. ಆ ಮೂಲಕ, ಅಧಿಕೃತವಾಗಿ ಮಿಗ್ 21 ಫೈಟರ್ ಜೆಟ್ ವಿಮಾನ ಅಧಿಕೃತ ಇತಿಹಾಸದ ಗತಪುಟಕ್ಕೆ ಸೇರ್ಪಡೆಯಾಗಲಿದೆ.

ಹಾರುವ ಶವಪೆಟ್ಟಿಗೆ ಅಂತಾ ಕರೆಯುತ್ತಿದ್ದದ್ದು ಏಕೆ?
ಮಿಗ್-21 ರ ದಾಖಲೆ ಅತ್ಯುತ್ತಮವಾಗಿತ್ತು, ಆದರೆ ಕಳೆದ ಕೆಲವು ದಶಕಗಳಲ್ಲಿ ಅದರ ಅಪಘಾತಗಳು ಅದಕ್ಕೆ ಕೆಟ್ಟ ಹೆಸರನ್ನು ತಂದಿವೆ. ಕಳೆದ 60 ವರ್ಷಗಳಲ್ಲಿ, 400 ಕ್ಕೂ ಹೆಚ್ಚು ಮಿಗ್-21 ವಿಮಾನಗಳು ಅಪಘಾತಕ್ಕೀಡಾಗಿದ್ದು, ಇದರಲ್ಲಿ 200 ಕ್ಕೂ ಹೆಚ್ಚು ಪೈಲಟ್‌ಗಳು ಪ್ರಾಣ ಕಳೆದುಕೊಂಡರು. 2010 ರ ನಂತರವೂ, 20 ಕ್ಕೂ ಹೆಚ್ಚು ವಿಮಾನಗಳು ಅಪಘಾತಕ್ಕೀಡಾಗಿವೆ. ಆದರೂ, ಕೆಲವು ತಜ್ಞರು MiG-21 ಗಳ ಸಂಖ್ಯೆ ತುಂಬಾ ಹೆಚ್ಚಾಗಿತ್ತು (874 ವಿಮಾನಗಳು), ಆದ್ದರಿಂದ ಅಪಘಾತಗಳ ಸಂಖ್ಯೆಯೂ ಹೆಚ್ಚಾಗಿರುವಂತೆ ತೋರುತ್ತದೆ ಎಂದು ಹೇಳುತ್ತಾರೆ. ಅದರ ವಯಸ್ಸು ಮತ್ತು ಸುರಕ್ಷತಾ ಕಾಳಜಿಗಳು ಅದನ್ನು ನಿವೃತ್ತಿಗೊಳಿಸುವ ನಿರ್ಧಾರವನ್ನು ಅಗತ್ಯವಾಗಿಸಿತು.

ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವಾಲಯದ ಹಲವು ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಈ ಫೈಟರ್ ಜೊತೆ ಕೆಲಸ ಮಾಡಿದವರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ವಿಮಾನಗಳ ವಾಯಿದೆ ಮುಗಿದಿದ್ದರೂ, ಹೊಸ ಯುದ್ದ ವಿಮಾನಗಳು ( LCA Mk1A ) ಬರುವುದು ತಡವಾದ ಹಿನ್ನಲೆಯಲ್ಲಿ ಭಾರತೀಯ ವಾಯುಪಡೆ, ಇಷ್ಟು ದಿನ ಮಿಗ್ 21 ವಿಮಾನವನ್ನು ತನ್ನಲ್ಲೇ ಉಳಿಸಿಕೊಳ್ಳಬೇಕಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!