ಹೊಸದಿಗಂತ ವರದಿ,ಹಾವೇರಿ:
ಪ್ರದಾನಿ ನರೇಂದ್ರ ಮೋದಿ ಅವರ ಕನಸಿನ ಡಿಜಿಟಲ್ ಇಂಡಿಯಾ ಭಾಗವಾಗಿ ಹಾವೇರಿ ಜಿಲ್ಲೆಯಲ್ಲಿ ಶೇ.೫೬ರಷ್ಟು ಜನರು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಸಾಥ್ ನೀಡುತ್ತಿದ್ದಾರೆ. ಇದನ್ನು ಶೇ.೧೦೦ಕ್ಕೆ ಹೆಚ್ಚಿಸುವಂತೆ ಮನವೊಲಿಸಲಾಗುತ್ತಿದೆ ಎಂದು ಮಾಜಿ ಸಚಿವ ಎಸ್.ಎ. ರಾಮದಾಸ ಹೇಳಿದರು.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಂ ಸ್ವನಿಧಿ ಸೇ ಪಿಎಂ ಸಂಮೃದ್ಧಿ ತಕ್ ಯೋಜನೆಯ ಜಾಗೃತಿಗೆ ರಾಜ್ಯ ಪ್ರವಾಸ ಕೈಗೊಂಡಿದ್ದು, ಹಾವೇರಿ ಜಿಲ್ಲೆ ಕೊನೆಯ ಜಿಲ್ಲೆಯಾಗಿದೆ.
ದೇಶದಲ್ಲಿ ೧೦೭ಕೋಟಿ ಜನರು ಇದರ ಬಳಕೆ ಮಾಡುತ್ತಿದ್ದಾರೆ. ರಾಜ್ಯದಲ್ಲೂ ಶೇ.೬೫ರಷ್ಟು ಜನರು ಇದನ್ನು ಬಳಕೆ ಮಾಡುತ್ತಿದ್ದಾರೆ. ಅವರಿಗೆ ಪ್ರೋತ್ಸಾಹ ಧನವಾಗಿ ರೂ.೧೦೦ ನೀಡಲಾಗುತ್ತಿದ್ದು, ದೇಶಾದ್ಯಂತ ರೂ.೪೨.೮೬ಲಕ್ಷ ಹಣವನ್ನು ಅವರಿಗೆ ಪಾವತಿಸಲಾಗಿದೆ ಎಂದು ತಿಳಿಸಿದರು.
ಪಿಎಂ ವಿಶ್ವಕರ್ಮ ಅಡಿ ಮನೆ ಮನೆಗೆ ಸೇವೆ ಒದಗಿಸುವ, ಪತ್ರಿಕಾ ವಿತರಕರು, ಎಲ್ಲಾ ಹಾಲು ವಿತರಕರು, ಆಹಾರ ಸಿದ್ದಪಡಿಸಿ ನೀಡುವ ಕೇಟರಿಂಗ್ ವ್ಯವಸ್ಥೆಯಲ್ಲಿರುವ ಎಲ್ಲಾ ಸಿಬ್ಬಂದಿ, ಸೇವಾ ಕ್ಷೇತ್ರದಲ್ಲಿನ ಎಲ್ಲಾ ಡೆಲಿವರಿ ಬಾಯ್‌ಗಳು ಇದರ ವ್ಯಾಪ್ತಿಗೆ ಒಳಗೊಳ್ಳಲಿದ್ದಾರೆ.
ಇದರ ಅಡಿಯಲ್ಲಿ ರಾಜ್ಯದಲ್ಲಿ ೩೧೧ ಸ್ಥಳೀಯ ತಂಡಗಳನ್ನು ಸಿದ್ಧಪಡಿಸಿದ್ದು, ಸಮಾಜದ ಕಟ್ಟ ಕಡೆಯ ವ್ಯಕ್ತಿಯೂ ಈ ಯೋಜನೆಯ ಸೌಲಭ್ಯ ತಲುಪಿಸಲು ನಿರಂತರ ಕೆಲಸ ಮಾಡುವಂತೆ ಸೂಚಿಸಲಾಗಿದೆ ಎಂದರು.
ಈ ವೇಳೆ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ, ಮಾಜಿ ಶಾಸಕ ಶಿವರಾಜ ಸಜ್ಜನರ, ವಿರುಪಾಕ್ಷಪ್ಪ ಬಳ್ಳಾರಿ, ಡಾ.ಬಸವರಾಜ ಕೇಲಗಾರ, ಗವಿಸಿದ್ದಪ್ಪ ದ್ಯಾಮಣ್ಣನವರ ಇದ್ದರು