6,6,6,6,6…ಇದೇ ಅಲ್ವಾ ಕಮ್ ಕಂಬ್ಯಾಕ್ ಅಂದ್ರೆ…: ಟೀಕೆಗಳಿಗೆ ಶತಕದ ಮೂಲಕ ಉತ್ತರಿಸಿದ ಸಂಜು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಂಗ್ಲಾದೇಶ ವಿರುದ್ಧದ ಮೂರನೇ ಹಾಗೂ ಕೊನೆಯ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾದ ಆರಂಭಿಕ ಬ್ಯಾಟ್ಸ್​ಮನ್ ಸಂಜು ಸ್ಯಾಮ್ಸನ್ ಸಿಡಿಲಬ್ಬರದ ಶತಕ ಸಿಡಿಸಿ ಮಿಂಚಿದ್ದಾರೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ಸಂಜು ಸಿಡಿಸಿದ ಚೊಚ್ಚಲ ಶತಕ ಇದಾಗಿದ್ದು,ಕೇವಲ 40 ಎಸೆತಗಳಲ್ಲಿ ತಮ್ಮ ಶತಕವನ್ನು ಪೂರ್ಣಗೊಳಿಸಿದರು.

ಬಹಳ ದಿನಗಳಿಂದ ಕಳಪೆ ಫಾರ್ಮ್​ನಿಂದ ಬಳಲುತ್ತಿದ್ದ ಸಂಜು ಸ್ಯಾಮ್ಸನ್​ಗೆ ಮೂರನೇ ಟಿ20 ಪಂದ್ಯದ ಮಾಡು ಇಲ್ಲವೇ ಮಡಿ ಪಂದ್ಯವಾಗಿತ್ತು. ಈ ಪಂದ್ಯದಲ್ಲಿ ಅಬ್ಬರಿಸಿದ್ದರಷ್ಟೇ ಸಂಜುಗೆ ಮುಂದಿನ ಸರಣಿಯಲ್ಲಿ ಅವಕಾಶ ಸಿಗುತ್ತಿತ್ತು. ಇಲ್ಲದಿದ್ದರೆ ಸಂಜು ಸ್ಯಾಮ್ಸನ್​ರ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕು ಭಾಗಶಃ ಅಂತ್ಯವಾಗುತ್ತಿತ್ತು. ಆದರೆ ತನಗೆ ಸಿಕ್ಕಿದ ಕೊನೆಯ ಅವಕಾಶವನ್ನು ಸ್ಮರಣೀಯಗೊಳಿಸಿದ ಸಂಜು ದಾಖಲೆಯ ಶತಕ ಸಿಡಿಸಿದರು. ಈ ಮೂಲಕ ತನ್ನ ಮೇಲೆ ನಾಯಕ ಸೂರ್ಯ ಇಟ್ಟಿದ್ದ ನಂಬಿಕೆಯನ್ನೂ ಸಹ ಉಳಿಸಿಕೊಂಡರು.

ಆರಂಭದಿಂದಲೂ ಅಬ್ಬರಿಸಲು ಶುರು ಮಾಡಿದ್ದ ಸಂಜು ಒಂದೇ ಗೇರ್​ನಲ್ಲಿ ಬ್ಯಾಟ್ ಬೀಸಿದರು. ಹೀಗಾಗಿ ಸಂಜು ಕೇವಲ 22 ಎಸೆತಗಳಲ್ಲಿ ಅರ್ಧಶತಕ ಪೂರ್ಣಗೊಳಿಸಿದರು. ಆ ನಂತರ ಕೇವಲ 40 ಎಸೆತಗಳಲ್ಲಿ ತಮ್ಮ ಟಿ20 ಅಂತಾರಾಷ್ಟ್ರೀಯ ವೃತ್ತಿಜೀವನದ ಮೊದಲ ಶತಕವನ್ನು ಪೂರ್ಣಗೊಳಿಸಿದರು.

ಸಂಜು ಸಿಡಿಸಿದ ಈ ಶತಕ ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ಸಂಜು ಭಾರತದ ಪರ ದಾಖಲಾದ ಎರಡನೇ ವೇಗದ ಶತಕವಾಗಿದೆ. 35 ಎಸೆತಗಳಲ್ಲಿ ಶತಕ ಸಿಡಿಸಿದ್ದ ಮಾಜಿ ನಾಯಕ ರೋಹಿತ್ ಶರ್ಮಾ ಹೆಸರಿನಲ್ಲಿ ಈ ದಾಖಲೆ ಇದೆ. ಇದಲ್ಲದೆ ಈ ಹಿಂದೆ 45 ಎಸೆತಗಳಲ್ಲಿ ಶತಕ ಸಿಡಿಸಿ ಎರಡನೇ ಸ್ಥಾನದಲ್ಲಿದ್ದ ಸೂರ್ಯಕುಮಾರ್ ಯಾದವ್​ರನ್ನು ಸಂಜು ಸ್ಯಾಮ್ಸನ್ ಹಿಂದಿಕ್ಕಿದ್ದಾರೆ. ಅಷ್ಟೇ ಅಲ್ಲ, ಬಾಂಗ್ಲಾದೇಶ ವಿರುದ್ಧ ಟಿ20 ಅಂತಾರಾಷ್ಟ್ರೀಯ ಶತಕ ಸಿಡಿಸಿದ ಭಾರತದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ಸಂಜು ಪಾತ್ರರಾಗಿದ್ದಾರೆ.

297 ರನ್ ಸಿಡಿಸಿ ಐತಿಹಾಸಿಕ ದಾಖಲೆ ಬರೆದ ಭಾರತ
ಬಾಂಗ್ಲಾದೇಶ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು, ಸಂಜು ಸ್ಯಾಮ್ಸನ್ ಮತ್ತು ಸೂರ್ಯಕುಮಾರ್ ಅಬ್ಬರ ಬ್ಯಾಟಿಂಗ್ ನಡೆಸಿದರು. ಸ್ಫೋಟಕ ಬ್ಯಾಟಿಂಗ್ ಮಾಡಿದ್ದ ಸ್ಯಾಮ್ಸನ್ 40 ಎಸೆತಗಳಲ್ಲಿ 100 ರನ್ ಪೇರಿಸಿ ವೇಗದ ಶತಕ ಸಿಡಿಸಿದರು. 8 ಸಿಕ್ಸ್ ಮತ್ತು 11 ಬೌಂಡರಿ ನೆರವಿನಿಂದ ಸ್ಯಾಮ್ಸನ್ 111 ರನ್ ಗಳಿಸಿ ಔಟಾದರು. ಇನ್ನು ಸೂರ್ಯಕುಮಾರ್ 75 ರನ್ ಬಾರಿಸಿ ಔಟಾದರು.ನಂತರ ಬಂದ ಹಾರ್ದಿಕ್ ಪಾಂಡ್ಯ ಸಹ ಸ್ಫೋಟಕ ಬ್ಯಾಟಿಂಗ್ ಮಾಡಿ 4 ಸಿಕ್ಸರ್ ಮತ್ತು 4 ಬೌಂಡರಿ ಸಿಡಿಸಿ 18 ಎಸೆತಗಳಲ್ಲಿ 47 ರನ್ ಬಾರಿಸಿ ಔಟಾದರು. ಇನ್ನು ರಿಯಾನ್ ಪರಾಗ್ 13 ಎಸೆತಗಳಲ್ಲಿ 34 ರನ್ ಸಿಡಿಸಿ ಔಟಾದರು. ಒಟ್ಟಾರೆ ನಿಗದಿತ ಓವರ್ ನಲ್ಲಿ ಭಾರತ 6 ವಿಕೆಟ್ ನಷ್ಟಕ್ಕೆ 297 ರನ್ ಬಾರಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!