Tuesday, December 2, 2025

7.11 ಕೋಟಿ ದರೋಡೆ ಕೇಸ್: ಭದ್ರತಾ ಲೋಪವೆಸಗಿದ CMS ವಿರುದ್ಧ ಕ್ರಮಕ್ಕೆ RBI ಗೆ ಪೊಲೀಸರ ಪತ್ರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಗರದಲ್ಲಿ ಹಾಡಹಗಲೇ ನಡೆದ 7.11 ಕೋಟಿ ರೂಪಾಯಿಗಳ ಬೃಹತ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಪೊಲೀಸ್ ಇಲಾಖೆಯು ಅಂತಿಮವಾಗಿ ಎಚ್ಚೆತ್ತುಕೊಂಡಿದೆ. ಎಚ್‌ಡಿಎಫ್‌ಸಿ ಬ್ಯಾಂಕಿನ ಹಣ ಸಾಗಾಣಿಕೆಯ ವೇಳೆ ನಡೆದ ಈ ದರೋಡೆಯು, ಹಣ ನಿರ್ವಹಣೆಯ ಸಂಸ್ಥೆಗಳ ಭದ್ರತಾ ಲೋಪಗಳ ಮೇಲೆ ಬೆಳಕು ಚೆಲ್ಲಿದೆ.

ಈ ಹಿನ್ನೆಲೆಯಲ್ಲಿ, ಸಿಎಂಎಸ್ ಸಂಸ್ಥೆಯು ಭದ್ರತೆಯಲ್ಲಿ ಗಂಭೀರ ನಿರ್ಲಕ್ಷ್ಯ ವಹಿಸಿರುವುದು ಕಂಡುಬಂದಿದ್ದು, ಸಂಸ್ಥೆಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಬೆಂಗಳೂರು ಪೊಲೀಸರು ಭಾರತೀಯ ರಿಸರ್ವ್ ಬ್ಯಾಂಕ್ ಗೆ ಪತ್ರ ಬರೆದಿದ್ದಾರೆ.

ದರೋಡೆಯ ಬಳಿಕ ಎಚ್ಚೆತ್ತಿರುವ ಪೊಲೀಸ್ ಇಲಾಖೆಯು, ಇನ್ನು ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಕಟ್ಟುನಿಟ್ಟಿನ ಹೊಸ ಮಾರ್ಗಸೂಚಿಗಳನ್ನು ಜಾರಿಗೆ ತರಲು ಸಿದ್ಧತೆ ನಡೆಸಿದೆ. ಈ ಸಂಬಂಧ, ಕಮಿಷನರ್ ಕಚೇರಿಯಲ್ಲಿ ಎಲ್ಲಾ ಎಟಿಎಂಗಳಿಗೆ ಹಣ ತುಂಬಿಸುವ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಹಾಗೂ ಆರ್‌ಬಿಐ ಅಧಿಕಾರಿಗಳೊಂದಿಗೆ ಸಭೆ ನಡೆಸಲು ಪ್ಲಾನ್ ಮಾಡಲಾಗಿದೆ. ಈ ಸಭೆಯು ಬಹುತೇಕ ಇದೇ ವಾರ ನಡೆಯುವ ಸಾಧ್ಯತೆಯಿದೆ.

ಪೊಲೀಸ್ ಇಲಾಖೆಯು ನಗರದ ಎಲ್ಲಾ ಕೋ-ಆಪರೇಟಿವ್ ಬ್ಯಾಂಕ್‌ಗಳು ಸೇರಿದಂತೆ ಇತರೆ ಎಲ್ಲಾ ಬ್ಯಾಂಕ್‌ಗಳ ಪಟ್ಟಿಯನ್ನು ಸಿದ್ಧಪಡಿಸುತ್ತಿದೆ. ರಿಜಿಸ್ಟರ್ ಆಫ್ ಸೊಸೈಟಿಯಿಂದ ಮಾಹಿತಿ ಪಡೆದು, ತಮ್ಮ ವ್ಯಾಪ್ತಿಯಲ್ಲಿ ಬರುವ ಸಂಸ್ಥೆಗಳ ಪಟ್ಟಿಯನ್ನು ತಯಾರಿಸಲು ಡಿಸಿಪಿಗಳಿಗೆ ಸೂಚನೆ ನೀಡಲಾಗಿದೆ.

ಸಿಬ್ಬಂದಿ ನೇಮಕಾತಿಯಲ್ಲಿ ಅನುಸರಿಸಬೇಕಾದ ನಿಯಮಗಳನ್ನು ಉಲ್ಲಂಘಿಸಿರುವ ಸಂಸ್ಥೆಗಳ ವಿರುದ್ಧ ಪೊಲೀಸರು ಗಂಭೀರ ಕ್ರಮಕ್ಕೆ ಮುಂದಾಗಿದ್ದಾರೆ. ಮುಖ್ಯವಾಗಿ, ಸಿಬ್ಬಂದಿ ನೇಮಕಕ್ಕೆ ಎನ್‌ಒಸಿ ಪಡೆಯದಿರುವುದು, ಸೂಕ್ತ ದಾಖಲೆಗಳ ಪರಿಶೀಲನೆ ಇಲ್ಲದೆ ನೇಮಕಾತಿ ಮಾಡಿರುವುದು ಹಾಗೂ ಸಾಲು ಸಾಲು ಭದ್ರತಾ ಲೋಪಗಳನ್ನು ಎಸಗಿರುವುದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.

ಈ ನಿರ್ಲಕ್ಷ್ಯಕ್ಕೆ ಸಂಸ್ಥೆಗಳಿಗೆ ನೇರವಾಗಿ ಆರ್‌ಬಿಐ ಮೂಲಕವೇ ಕಠಿಣ ವಾರ್ನಿಂಗ್ ನೀಡಲು ಮತ್ತು ಕಡ್ಡಾಯವಾಗಿ ಪಾಲಿಸಬೇಕಾದ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಲು ಪೊಲೀಸರು ನಿರ್ಧರಿಸಿದ್ದಾರೆ.

error: Content is protected !!