ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಾಹ್ನ ಊಟ ಸೇವಿಸಿದ ಬಳಿಕ 7 ಶಾಲಾ ಮಕ್ಕಳು ಅಸ್ವಸ್ಥಗೊಂಡ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಗರಗನಹಳ್ಳಿಯ ಮೊರಾರ್ಜಿ ವಸತಿ ಶಾಲೆಯಲ್ಲಿ ನಡೆದಿದೆ. ಒಟ್ಟು 210 ಶಾಲಾ ಮಕ್ಕಳು ಊಟ ಮಾಡಿದ್ದು, ಈ ಪೈಕಿ 7 ಮಕ್ಕಳು ಅಸ್ವಸ್ಥರಾಗಿದ್ದಾರೆ. ಊಟ ಮಾಡಿದ ನಂತರ ಮಕ್ಕಳಲ್ಲಿ ವಾಂತಿ ಭೇದಿ ಕಾಣಿಸಿಕೊಂಡಿದೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಎಂದಿನಂತೆಯೇ ಮಧ್ಯಾಹ್ನಕ್ಕೆ ಮೆಂತೆ ಭಾತ್ ಮಾಡಲಾಗಿತ್ತು. ಅದನ್ನು ಸೇವಿಸಿದ ನಂತರ 7 ಮಂದಿ ವಿದ್ಯಾರ್ಥಿಗಳು ಅಸ್ವಸ್ಥಗೊಂಡರು. ಉಳಿದೆಲ್ಲ ವಿದ್ಯಾರ್ಥಿಗಳು ಸಹಜವಾಗಿಯೇ ಇದ್ದಾರೆ ಎಂದು ಶಾಲಾ ಮೂಲಗಳು ತಿಳಿಸಿವೆ.
ಅಸ್ವಸ್ಥಗೊಂಡಿರುವ ಮಕ್ಕಳಿಗೆ ವರಿಯಾಲ, ಬೇಗೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದ್ದು, 7 ಮಂದಿ ವಿದ್ಯಾರ್ಥಿಗಳನ್ನೂ ಡಿಸ್ಚಾರ್ಜ್ ಮಾಡಲಾಗಿದೆ. ಮಕ್ಕಳಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗಿತ್ತು. ಪರಿಣಾಮವಾಗಿ ಅವರು ಅಸ್ವಸ್ಥಗೊಂಡಿದ್ದರು ಎಂದು ವೈದ್ಯರು ಹೇಳಿದ್ದಾರೆ.