ಪ್ರಧಾನಿ ಮೋದಿ ಭದ್ರತೆಯಲ್ಲಿ ಲೋಪ: 7 ಪೊಲೀಸ್‌ ಅಧಿಕಾರಿಗಳು ಅಮಾನತು

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಪ್ರಧಾನಿ ನರೇಂದ್ರ ಮೋದಿಯವರ ಪಂಜಾಬ್‌ ಭೇಟಿ ವೇಳೆ ಭದ್ರತೆಯಲ್ಲಿ ಲೋಪ ಕಂಡುಬಂದ ಹಿನ್ನೆಲೆಯಲ್ಲಿ ಏಳು ಪೊಲೀಸ್‌ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.

ಕಳೆದ ವರ್ಷ ಜನವರಿ 5 ರಂದು ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ರ್ಯಾಲಿಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಪಂಜಾಬ್‌ಗೆ ಭೇಟಿ ನೀಡಿದ್ದರು. ಈ ವೇಳೆ ಪ್ರತಿಭಟನಾನಿರತ ರೈತರು ರಸ್ತೆ ತಡೆ ನಡೆಸಿದರು. ಇದರಿಂದಾಗಿ ಪ್ರಧಾನಿಯವರ ಬೆಂಗಾವಲು ಪಡೆ ವಾಹನವು ಸುಮಾರು 20 ನಿಮಿಷಗಳ ಕಾಲ ಫಿರೋಜ್‌ಪುರದ ಪ್ಯಾರಾನಾ ಮೇಲ್ಸೇತುವೆಯಲ್ಲಿ ಸಿಲುಕಿಕೊಂಡಿತು. ನಂತರ ಅವರನ್ನು ವಿಮಾನ ನಿಲ್ದಾಣ ತಲುಪಿಸುವ ಕೆಲಸ ನಡೆದಿತ್ತು. ತದನಂತರ ಈ ವಿಷಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ವಿವಾದಗಳು ನಡೆದಿದ್ದವು.

ಭದ್ರತಾ ಉಲ್ಲಂಘನೆಯ ಬಗ್ಗೆ ತನಿಖೆ ನಡೆಸಿದ ಸುಪ್ರೀಂ ಕೋರ್ಟ್ ನೇಮಿಸಿದ ಸಮಿತಿಯು ಭದ್ರತಾ ಉಲ್ಲಂಘನೆಗೆ ಹಲವಾರು ರಾಜ್ಯದ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಿತ್ತು. ಪಂಜಾಬ್‌ನ ಅಂದಿನ ಮುಖ್ಯ ಕಾರ್ಯದರ್ಶಿ ಅನಿರುದ್ಧ್ ತಿವಾರಿ ಮತ್ತು ಡಿಜಿಪಿ ಸಿದ್ಧಾರ್ಥ್ ಚಟ್ಟೋಪಾಧ್ಯಾಯ ಅವರನ್ನು ತಪ್ಪಿತಸ್ಥರೆಂದು ಘೋಷಿಸಿತ್ತು. ಇದಾದ ಬಳಿಕ ಈ ಸಮಿತಿಯು ಆಗಸ್ಟ್ 2022 ರಲ್ಲಿ ಸುಪ್ರೀಂ ಕೋರ್ಟ್ ಮತ್ತು ಕೇಂದ್ರ ಸರ್ಕಾರಕ್ಕೆ ತನಿಖಾ ವರದಿಯನ್ನು ಸಲ್ಲಿಸಿತ್ತು.

ಪ್ರಸ್ತುತ ಭಗವಂತ್ ಮಾನ್ ನೇತೃತ್ವದ ಎಎಪಿ ಸರ್ಕಾರವು ಈಗ ಏಳು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿದೆ. ಇದರಲ್ಲಿ ಬಟಿಂಡಾ ಎಸ್‌ಪಿ ಗುರ್ಬಿಂದರ್ ಸಿಂಗ್, ಡಿಎಸ್‌ಪಿ ಪರ್ಸನ್ ಸಿಂಗ್, ಡಿಎಸ್‌ಪಿ ಜಗದೀಶ್ ಕುಮಾರ್, ಇನ್‌ಸ್ಪೆಕ್ಟರ್ ತೇಜಿಂದರ್ ಸಿಂಗ್, ಇನ್‌ಸ್ಪೆಕ್ಟರ್ ಬಲ್ವಿಂದರ್ ಸಿಂಗ್, ಇನ್‌ಸ್ಪೆಕ್ಟರ್ ಜತೀಂದರ್ ಸಿಂಗ್ ಮತ್ತು ಎಎಸ್‌ಐ ರಾಕೇಶ್ ಕುಮಾರ್ ಅವರ ಹೆಸರುಗಳಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!