ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಸಚಿವ ಸಂಪುಟ ಸಭೆಯಲ್ಲಿ (Cabinet Meeting) ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ಈ ಹಿಂದೆ ಘೋಷಣೆ ಮಾಡಿದಂತೆ ಲಿಂಗಾಯತರಿಗೆ ಪ್ರತ್ಯೇಕ ಮೀಸಲಾತಿ. 2 ಡಿ ಪ್ರವರ್ಗದ ಮೂಲಕ 7% ಮೀಸಲಾತಿ ನೀಡಲು ತೀರ್ಮಾನ ತೆಗೆದುಕೊಳ್ಳಲಾಗಿದೆ.
ಇದರ ಜೊತೆಗೆ ಒಕ್ಕಲಿಗರಿಗೆ 6% ಮೀಸಲಾತಿ ನೀಡಲಾಗಿದೆ. ಹಿಂದುಳಿದ ವರ್ಗದಿಂದ ಮುಸ್ಲಿಂ ಮೀಸಲಾತಿಗೆ ಕೋಕ್ ನೀಡಲಾಗಿದೆ.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಕೊನೆಯ ಸಂಪುಟ ಸಭೆ ಇಂದು ನಡೆದಿದ್ದು, ಕೊನೆಯ ಹಂತದಲ್ಲಿ ದೊಡ್ಡ ನಿರ್ಧಾರ ಮಾಡಿದೆ.
ಮುಸ್ಲಿಂ ಮೀಸಲಾತಿಗೆ ಕೊಕ್ ಕೊಡುವ ಬಗ್ಗೆ ಮಹತ್ವದ ನಿರ್ಧಾರ ಕೈಗೊಂಡಿದ್ದು, ಪ್ರವರ್ಗ-1 ಹಾಗೂ ಪ್ರವರ್ಗ-2ರಲ್ಲಿ ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿಯನ್ನು ತೆಗೆದು ಹಾಕಿದೆ. ಆ ಮೀಸಲಾತಿಯನ್ನು ತೆಗೆದು ಅವರನ್ನು ಆರ್ಥಿಕ ಹಿಂದುಳಿದ ಸಮುದಾಯದಡಿ ಸೇರ್ಪಡೆ ಮಾಡಲಾಗಿದೆ. ಈ ಮೂಲಕ ಪ್ರವರ್ಗ 2ಬಿ ರದ್ದು ಮಾಡಲಾಗಿದೆ.
ಒಕ್ಕಲಿಗ ಸಮುದಾಯದ ಮೀಸಲಾತಿ ಪ್ರಮಾಣ ಕೂಡ ಏರಿಕೆಯಾಗಿದೆ. ಸದ್ಯ 3ಎ ಪ್ರವರ್ಗದಡಿ 4% ಒಕ್ಕಲಿಗರು ಮೀಸಲಾತಿ ಪಡೆಯುತ್ತಿದ್ದಾರೆ. 3ಎ ಪ್ರವರ್ಗ ರದ್ದು ಮಾಡಿ 2ಸಿ ಪ್ರವರ್ಗ ಸೃಷ್ಟಿಸಲು ಸರ್ಕಾರ ಮುಂದಾಗಿದೆ. ಈ ಪ್ರವರ್ಗದ ಮೂಲಕ ಹೆಚ್ಚುವರಿಯಾಗಿ 2% ಮೀಸಲಾತಿ ನೀಡಲು ಸರ್ಕಾರದ ಲೆಕ್ಕಾಚಾರ. ಇದರಿಂದ 2ಸಿ ಮೂಲಕ ಮೀಸಲಾತಿ ಪ್ರಮಾಣ 6% ಕ್ಕೆ ಏರಿಕೆಯಾಗಿದೆ.
ಒಟ್ಟಾರೆಯಾಗಿ ಒಕ್ಕಲಿಗ ಸಮುದಾಯಕ್ಕೆ 2ಸಿ ಮೀಸಲಾತಿ ಅಡಿಯಲ್ಲಿ ಶೇ.6ರಷ್ಟು, ಲಿಂಗಾಯತ ಸಮುದಾಯಕ್ಕೆ 2ಡಿ ಮೀಸಲಾತಿ ಅಡಿ ಶೇ.7, ದಲಿತ ಎಡ ಎಸ್ಸಿ ಸಮುದಾಯಕ್ಕೆ ಶೇ.6, ದಲಿತ ಬಲ ಎಸ್ಸಿ ಸಮುದಾಯಕ್ಕೆ ಶೇ.5ರಷ್ಟು ಒಳ ಮೀಸಲಾತಿಯನ್ನು ಜಾರಿಗೊಳಿಸಲು ಇಂದಿನ ಸಚಿವ ಸಂಪುಟ ನಿರ್ಣಯ ಕೈಗೊಂಡಿದೆ.