February 1, 2026
Sunday, February 1, 2026
spot_img

ನಮ್ಮ ಬಾಂಧವ್ಯಕ್ಕೆ 7 ವರ್ಷಗಳ ಸುಂದರ ಇತಿಹಾಸ: ಟ್ರೋಲರ್‌ಗಳಿಗೆ ಖಡಕ್ ಉತ್ತರ ಕೊಟ್ಟ ಆಲಿಯಾ ಭಟ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್‌ನ ನಟಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಜೋಡಿ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಆಗಾಗ್ಗೆ ಋಣಾತ್ಮಕ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ರಣಬೀರ್ ಕಪೂರ್ ಅವರು ಆಲಿಯಾ ಮೇಲೆ ನಿಯಂತ್ರಣ ಸಾಧಿಸುತ್ತಾರೆ ಅಥವಾ ಅವರ ನಡುವೆ ಎಲ್ಲವೂ ಸರಿಯಿಲ್ಲ ಎಂಬಂತಹ ವದಂತಿಗಳು ಹರಿದಾಡುತ್ತಿರುತ್ತವೆ. ಇದೀಗ ಇಂತಹ ಟ್ರೋಲರ್‌ಗಳಿಗೆ ಆಲಿಯಾ ಭಟ್ ತಕ್ಕ ಉತ್ತರ ನೀಡುವ ಮೂಲಕ ಎಲ್ಲರ ಬಾಯಿ ಮುಚ್ಚಿಸಿದ್ದಾರೆ.

ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ಆಲಿಯಾ ಭಟ್, ಆನ್‌ಲೈನ್‌ನಲ್ಲಿ ತಮ್ಮ ಸಂಬಂಧದ ಬಗ್ಗೆ ನಡೆಯುವ ಚರ್ಚೆಗಳು ಸಂಪೂರ್ಣವಾಗಿ ‘ಅಸಂಬದ್ಧ’. ನಮ್ಮ ನಡುವಿನ ಬಾಂಧವ್ಯಕ್ಕೆ ಸರಿಸುಮಾರು 7 ವರ್ಷಗಳ ಸುಂದರ ಇತಿಹಾಸವಿದೆ. ಆದರೆ ಜನರು ಕೇವಲ 7 ಸೆಕೆಂಡ್‌ನ ಅಥವಾ 3 ಸೆಕೆಂಡ್‌ನ ವಿಡಿಯೋ ತುಣುಕುಗಳನ್ನು ನೋಡಿ ನಮ್ಮ ಸಂಬಂಧದ ಬಗ್ಗೆ ತೀರ್ಪು ನೀಡುತ್ತಾರೆ. ಈ ಗದ್ದಲಗಳು ನಮಗೆ ಕೇಳಿಸುವುದೇ ಇಲ್ಲ, ಏಕೆಂದರೆ ಅದು ನೈಜವಲ್ಲ ಎಂದು ಅವರು ಹೇಳಿದ್ದಾರೆ.

ಇದರಿಂದ ನನ್ನ ಕುಟುಂಬದ ನೆಮ್ಮದಿ ಬದಲಾಗಿದೆಯೇ? ಖಂಡಿತ ಇಲ್ಲ. ನನ್ನ ದೈನಂದಿನ ಬದುಕು ಮೊದಲಿಗಿಂತಲೂ ಸುಂದರವಾಗಿದೆ. ಪ್ರತಿದಿನ ನಾನು ನೆಮ್ಮದಿಯಿಂದ ಮತ್ತು ಕೃತಜ್ಞತೆಯಿಂದ ನಿದ್ರಿಸುತ್ತೇನೆ. ಜನರು ಏನು ಅಂದುಕೊಳ್ಳುತ್ತಾರೆ ಎಂಬುದು ನನಗೆ ಮುಖ್ಯವಲ್ಲ. ಒಂದು ಕೋಣೆಯಲ್ಲಿ 50 ಜನರಿದ್ದರೆ, ಅದರಲ್ಲಿ ಕೇವಲ ನಾಲ್ವರಿಗೆ ಮಾತ್ರ ನಿಮ್ಮ ಬಗ್ಗೆ ನಿಜವಾದ ಕಾಳಜಿ ಇರುತ್ತದೆ. ಉಳಿದವರು ಏನು ಬೇಕಾದರೂ ಯೋಚಿಸಬಹುದು ಎಂದು ಆಲಿಯಾ ಹೇಳುವ ಮೂಲಕ ತಮಗೆ ಟ್ರೋಲ್‌ಗಳ ಬಗ್ಗೆ ತಲೆಕೆಡಿಸಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದೇ ಸಂದರ್ಭ ರಣಬೀರ್ ಕಪೂರ್ ಅವರ ತಂದೆಯ ಜವಾಬ್ದಾರಿಯ ಬಗ್ಗೆ ಆಲಿಯಾ ಹೆಮ್ಮೆಯಿಂದ ಮಾತನಾಡುತ್ತಾ ,ಮಗಳು ರಾಹಾ ಹುಟ್ಟಿದ ಮೇಲೆ ರಣಬೀರ್ ಪೂರ್ತಿ ಬದಲಾಗಿದ್ದಾರೆ. ಅವರು ಹೊರಜಗತ್ತಿಗೆ ನಾಚಿಕೆ ಸ್ವಭಾವದವರಾಗಿ ಕಾಣಬಹುದು, ಆದರೆ ರಾಹಾ ಜೊತೆಗಿರುವಾಗ ಅವರೇ ಮಗುವಾಗಿಬಿಡುತ್ತಾರೆ. ಶೂಟಿಂಗ್‌ನಲ್ಲಿದ್ದರೂ ಮಗಳನ್ನು ನೋಡಲು ಓಡಿ ಬರುತ್ತಾರೆ. ರಾಹಾ ಹುಟ್ಟುವ ಮೊದಲು ಮತ್ತು ನಂತರ ಅವರು ನನ್ನನ್ನು ಅತಿಯಾಗಿ ಕಾಳಜಿ ಮಾಡಿದ್ದಾರೆ ಎಂದು ಆಲಿಯಾ ಹೇಳಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !