ಹೊಸದಿಗಂತ ವರದಿ , ಮೈಸೂರು:
ರಾಜ್ಯದ ಐದು ಸಾವಿರ ಕಿ.ಮಿ. ಹೆದ್ದಾರಿಯನ್ನು 70ಸಾವಿರ ಕೋಟಿ ರೂ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಶೀಘ್ರದಲ್ಲೇ ಹಣವನ್ನು ಬಿಡುಗಡೆ ಮಾಡಲಾಗುವುದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದರು.
ಸೋಮವಾರ ಸಂಜೆ ಮೈಸೂರಿನ ಮಹಾರಾಜ ಕಾಲೇಜಿನ ಮೈದಾನದಲ್ಲಿ ಆಯೋಜಿಸಲಾಗಿದ್ದ ಕೇಂದ್ರ ಸರ್ಕಾರದ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ, ನಾಗನಹಳ್ಳಿ ಹೊಸ ಕೋಚಿಂಗ್ ಕಾಂಪ್ಲೆಕ್ಸ್, ಮೈಸೂರು ರೈಲು ನಿಲ್ದಾಣ ಅಭಿವೃದ್ದಿಗೆ ಶಂಕುಸ್ಥಾಪನೆ ಹಾಗೂ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ಎಕ್ಸಲೆನ್ಸ್ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರದಲ್ಲಿ ನಮ್ಮ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ಬಡವರು, ರೈತರು, ಕೃಷಿಕರು, ಕಾರ್ಮಿಕರ ಪರ ಹತ್ತು ಹಲವು ಯೋಜನೆ ಜಾರಿ ಮಾಡಿರುವುದು ಒಂದೆಡೆಯಾದರೆ, ಸಾಮಾಜಿಕ ವ್ಯವಸ್ಥೆಯನ್ನು ಸುಧಾರಿಸುವ ನಿಟ್ಟಿನಲ್ಲಿಯೂ ಕೂಡ ಮಹತ್ವದ ಹೆಜ್ಜೆ ಇರಿಸಲಾಗಿದೆ. ಈವರೆಗೆ 5 ಸಾವಿರ ಕಿಲೋ ಮೀಟರ್ ರಸ್ತೆಯನ್ನು ಉನ್ನತೀಕರಿಸಲಾಗಿದ್ದರೆ, ಮತ್ತಷ್ಟು ರಸ್ತೆಗಳನ್ನು ಅಭಿವೃದ್ದಿ ಮಾಡಲಾಗಿದೆ. ಇನ್ನು ಕರ್ನಾಟಕದಲ್ಲಿ ಕೇಂದ್ರ ಸರ್ಕಾರ ಪುರಸ್ಕೃತ ಯೋಜನೆಗಳು ಸಂಪೂರ್ಣವಾಗಿ ಅನುಷ್ಠಾನಗೊಂಡ ಬಳಿಕ ಕರ್ನಾಟಕದ ಇಡೀ ಚಿತ್ರಣವೇ ಬದಲಾಗಲಿದೆ. ಇಡೀ ರಾಜ್ಯದ ಉದ್ಯಮ ನಿರೀಕ್ಷೆಗೂ ಮೀರಿ ಬೆಳವಣಿಗೆ ಕಾಣಲಿದೆ. ಮುಂದಿನ ಕೆಲವೇ ವರ್ಷಗಳಲ್ಲಿ ಕರ್ನಾಟಕದ ರೈಲು ಮಾರ್ಗದಲ್ಲಿ 1600 ಕಿಮೀ ವಿದ್ಯುದೀಕರಣ ಯೋಜನೆ ಪೂರ್ಣಗೊಳ್ಳಲಿದೆ. ಕೇಂದ್ರ ಸರ್ಕಾರದ ಆಯವ್ಯಯದಲ್ಲಿ ಕರ್ನಾಟಕ ರಾಜ್ಯಕ್ಕೆ ನಿರೀಕ್ಷೆಗೂ ಮೀರಿದ ಪಾಲು ನೀಡಲಾಗಿದೆ. ಈ ಎಲ್ಲಾ ಯೋಜನೆಗಳು ಸಂಪೂರ್ಣವಾಗಿ ಅನುಷ್ಠಾನಗೊಂಡ ಬಳಿಕ ಇಡೀ ದೇಶದ ನಕ್ಷೆಯಲ್ಲಿ ಕರ್ನಾಟಕ ಎದ್ದು ಕಾಣಲಿದೆ. ಇಂತಹ ಅಭಿವೃದ್ದಿ ಯೋಜನೆಗಳನ್ನು ನೀವು ಕಾಣಬೇಕಿದ್ದಲ್ಲಿ ನಿಮ್ಮ ಆಶೀರ್ವಾದ ನಮಗೆ ಬೇಕಿದೆ ಅದು ನಮಗೆ ಕೆಲಸ ಮಾಡುವ ಉತ್ತೇಜನ ನೀಡಲಿದೆ ಎಂದು ಹೇಳಿದರು.
ಡಬಲ್ ಇಂಜಿನ್ ಸರ್ಕಾರ ಎಂದು ಕುಹಕವಾಡುವ ಮಂದಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಅನುಷ್ಠಾನಗೊಳಿಸಿರುವ ಯೋಜನೆಗಳ ಪಟ್ಟಿ ಮುಖೇನ ಉತ್ತರ ಕೊಡಿ ಎಂದು ಟೀಕಾಕಾರರ ವಿರುದ್ಧ ಚಾಟಿ ಬೀಸಿದರು.
ಸ್ವಾತಂತ್ರ ನಂತರದಲ್ಲಿ ದೇಶದ ಆಡಳಿತ ನಡೆಸಿದವರು ನೀಡಿದ ಯೋಜನೆಗಳಿಗೂ ಕಳೆದ 8 ವರ್ಷಗಳಲ್ಲಿ ನಾವು ನೀಡಿದ ಯೋಜನೆಗಳಿಗೂ ತಾಳೆ ಮಾಡಿ ನೋಡಿ, ಫಲಿತಾಂಶ ನಿಮಗೆ ತಿಳಿಯಲಿದೆ. ಈ ವಿಚಾರ ಆ ಮಂದಿಗೆ ಗೊತ್ತಿದ್ದರೂ, ಕ್ಷುಲ್ಲಕ ಕಾರಣಕ್ಕಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರವನ್ನು ಸದಾ ಟೀಕಿಸುತ್ತಲೇ ಇದ್ದಾರೆ. ಇದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಗ್ಗುವುದಿಲ್ಲ. ಅದಕ್ಕಾಗಿ ನಿಮ್ಮೆಲ್ಲರ ಶಕ್ತಿಯನ್ನು ನಮಗೆ ಧಾರೆಯೆರಬೇಕಿದೆ ಎಂದು ಹೇಳಿದರು.
ರಾಜ್ಯದಲ್ಲಿ ಹಾಗೂ ದೇಶದಲ್ಲಿ ಅನೇಕ ಸರ್ಕಾರಗಳು ಆಡಳಿತ ನಡೆಸಿ ಹೋಗಿವೆ. ಆದರೆ, ಬಿಜೆಪಿ ನೇತೃತ್ವದ ಸರ್ಕಾರ ಹಳ್ಳಿ, ಮಹಿಳೆ, ರೈತ, ಬಡವ ಸೇರಿದಂತೆ ದೀನ ದಲಿತರ ಪರವಾಗಿ ಸದಾ ಯೋಜನೆ ರೂಪಿಸುತ್ತಾ ಬಂದಿದೆ. ಸರ್ಕಾರಿ ಯೋಜನೆಗಳು ಅರ್ಹ ವ್ಯಕ್ತಿಗೆ ತಲುಪಲೇಬೇಕು ಎಂಬ ಸಂಕಲ್ಪ ನಮ್ಮದಾಗಿದೆ ಎಂದರು.
ಗರೀಭಿ ಕಲ್ಯಾಣ ಯೋಜನೆ ಈ ಹಿಂದೆ ಸೀಮಿತ ಪರಿಮಿತಿಯಲ್ಲಿ ಇತ್ತು. ಆದರೆ, ಅದನ್ನು ದೇಶವ್ಯಾಪಿ ವಿಸ್ತರಿಸಲಾಗಿದೆ. ಇಂದು ಸದರಿ ಯೋಜನೆ ಇಂದು ರಾಜ್ಯದ ಗಡಿ ದಾಟಿ ಎಲ್ಲಡೆ ಹರಡಿದೆ. ಬಡತನ ಮುಕ್ತ ಕರ್ನಾಟಕ ಹಾಗೂ ಬಡತನ ಮುಕ್ತ ಭಾರತ ನಮ್ಮ ಪರಿಕಲ್ಪನೆ ಆಗಿದ್ದು, ಅದಕ್ಕಾಗಿ ಹತ್ತು ಹಲವು ಯೋಜನೆಗಳನ್ನು ರೂಪಿಸಲಾಗಿದೆ ಎಂದು ಹೇಳಿದ ಅವರು ಅದರ ಪ್ರಮುಖ ಭಾಗವಾಗಿಯೇ ಒಂದು ದೇಶ, ರೇಷನ್ ಒಂದು ರೇಷನ್ ಕಾರ್ಡ್ ಯೋಜನೆ ಒಳಗೊಂಡಿದೆ ಎಂದರು.
ಕೇoದ್ರ ಸರ್ಕಾರದ ಮಹಾತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ಆಯುಷ್ಮಾನ್ ಭಾರತ್ ಯೋಜನೆ ಇಂದು ಅತ್ಯಂತ ಯಶಸ್ವಿ ಯೋಜನೆಯಾಗಿದೆ. ಯಾವ ವ್ಯಕ್ತಿಯೂ ಅನಾರೋಗ್ಯದಿಂದ ಸಾಯಬಾರದು, ಸಂಕಷ್ಟಕ್ಕೆ ಸಿಲುಕಬಾರದು ಎಂಬ ಉದ್ದೇಶದಿಂದಲೇ ಆ ಯೋಜನೆ ಜಾರಿ ಮಾಡಿದ್ದು, ಯಶಸ್ಸು ಕಂಡಿದೆ. ಎಲ್ಲರಿಗೂ ಈ ಯೋಜನೆ ಲಾಭ ಸಿಗಬೇಕೆಂಬುದು ನಮ್ಮ ಸರ್ಕಾರದ ಗುರಿಯಾಗಿದೆ ಎಂದರು.
ಕಳೆದ ಎಂಟು ವರ್ಷಗಳಲ್ಲಿ ಜನರ ಭಾವನೆಗಳನ್ನು ಅರ್ಥಮಾಡಿಕೊಂಡು ನಮ್ಮ ಸರ್ಕಾರ ಹೆಜ್ಜೆ ಇಟ್ಟಿದೆ. ದೇಶದ ಪ್ರತೀಯೊಬ್ಬರ ಹಿತ ಕಾಯುವುದೇ ನಮ್ಮ ಉದ್ದೇಶವಾಗಿದ್ದು, ರೈತರಿಗಾಗಿ ಪಿಎಂ ಕಿಸಾನ್ ಯೋಜನೆ ಜಾರಿ ಮಾಡಲಾಗಿದೆ. ಈ ಯೋಜನೆ ಮೂಲಕ ಪ್ರತೀ ರೈತನ ಖಾತೆಗೆ ವರ್ಷ 10 ಸಾವಿರ ರೂ. ಜಮೆ ಆಗಲಿದೆ. ಇದಕ್ಕಾಗಿ 2 ಲಕ್ಷ ಕೋಟಿ ರೂ. ಹಣ ವಿನಿಯೋಗಿಸಲಾಗುತ್ತಿದೆ. ಕಿಸಾನ್ ಕ್ರಡಿಟ್ ಯೋಜನೆ ಮೂಲಕ ಸಣ್ಣ ಹಾಗೂ ಅತಿ ಸಣ್ಣ ರೈತರೂ ನೆಮ್ಮದಿಯ ಬದುಕು ಸಾಗಿಸಬೇಕೆನ್ನುವುದು ನಮ್ಮ ಆಲೋಚನೆಯಾಗಿದೆ. ಮಾತ್ರವಲ್ಲ, ಮುದ್ರಾ ಯೋಜನೆ ಮೂಲಕ ಸಣ್ಣ ಸಣ್ಣ ಉದ್ಯಮಿಗಳನ್ನು ಸ್ಥಾಪಿಸಲು ಅನುವು ಮಾಡಿಕೊಡಲಾಗಿದೆ. ಬೀದಿ ಬದಿ ವ್ಯಾಪಾರಸ್ತರೂ ಕೂಡ ನೆಮ್ಮದಿಯ ಬದುಕು ನಡೆಸಬೇಕು. ಆ ಕಾರಣದಿಂದಲೇ ಈ ಯೋಜನೆ ಜಾರಿ ಮಾಡಲಾಗಿದ್ದೂ ಅದು ನಿರೀಕ್ಷೆಗೂ ಮೀರಿದ ಯಶಸ್ಸು ಕಂಡಿದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯಪಾಲ ಥಾವರ್‌ಕರ್ ಗೆಹ್ಲೋಟ್, ಸಂಸದರಾದ ಪ್ರತಾಪ್ ಸಿಂಹ, ಶ್ರೀನಿವಾಸಪ್ರಸಾದ್, ಸುಮಲತಾ, ಶಾಸಕರಾದ ಎಸ್.ಎ.ರಾಮದಾಸ್, ನಾಗೇಂದ್ರ, ಹರ್ಷವರ್ಧನ, ಜಿ.ಟಿ.ದೇವೇಗೌಡ, ಮೇಯರ್ ಸುನಂದಾ ಪಾಲನೇತ್ರ ಉಪಸ್ಥಿತರಿದ್ದರು.