January19, 2026
Monday, January 19, 2026
spot_img

ಅಕ್ಷರ ದಾಸೋಹಿಯ 7ನೇ ಪುಣ್ಯ ಸಂಸ್ಮರಣೋತ್ಸವ: ಸಿದ್ದಗಂಗಾ ಕ್ಷೇತ್ರಕ್ಕೆ ಉಪರಾಷ್ಟ್ರಪತಿ ಆಗಮನ

ಹೊಸದಿಗಂತ ತುಮಕೂರು:

ಅಕ್ಷರ ದಾಸೋಹ ಹಾಗೂ ಜ್ಞಾನ ದಾಸೋಹದ ಮೂಲಕ ಕೋಟ್ಯಂತರ ಜನರ ಬಾಳಿಗೆ ಬೆಳಕಾದ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಗಳ 7ನೇ ಪುಣ್ಯ ಸಂಸ್ಮರಣೋತ್ಸವವು ಜನವರಿ 21ರಂದು ಸಿದ್ದಗಂಗಾ ಮಠದ ಆವರಣದಲ್ಲಿ ಅತ್ಯಂತ ಶ್ರದ್ಧಾಭಕ್ತಿಯಿಂದ ನೆರವೇರಲಿದೆ. ಈ ಮಹತ್ವದ ಕಾರ್ಯಕ್ರಮಕ್ಕೆ ಭಾರತದ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು ಚಾಲನೆ ನೀಡಲಿದ್ದಾರೆ ಎಂದು ಮಠದ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಜಯವಿಭವಸ್ವಾಮಿ ತಿಳಿಸಿದ್ದಾರೆ.

ಜನವರಿ 21ರಂದು ಬೆಳಿಗ್ಗೆ 10:40ಕ್ಕೆ ಹೆಲಿಪ್ಯಾಡ್ ಮೂಲಕ ಆಗಮಿಸಲಿರುವ ಉಪರಾಷ್ಟ್ರಪತಿಗಳು, ನೇರವಾಗಿ ಶ್ರೀಗಳ ಗದ್ದುಗೆಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ ನಂತರ ವೇದಿಕೆ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಶ್ರೀ ಸಿದ್ದಲಿಂಗ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಸದ್ಗುರು ಶ್ರೀ ಮಧುಸೂದನ ಸಾಯಿ ಹಾಗೂ ಕಿರಿಯ ಶ್ರೀಗಳಾದ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ ಉಪಸ್ಥಿತರಿರಲಿದ್ದಾರೆ.

ಕೇಂದ್ರ ಸಚಿವ ವಿ. ಸೋಮಣ್ಣ, ಗೃಹ ಸಚಿವ ಡಾ. ಜಿ. ಪರಮೇಶ್ವರ್, ಸಂಸದರಾದ ಗೋವಿಂದ ಕಾರಜೋಳ, ಡಾ. ಸಿ.ಎನ್. ಮಂಜುನಾಥ್ ಸೇರಿದಂತೆ ಹಲವು ಶಾಸಕರು ಹಾಗೂ ಜನಪ್ರತಿನಿಧಿಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಮಠದ ಆಡಳಿತಾಧಿಕಾರಿ ವಿಶ್ವನಾಥಯ್ಯ ಅವರ ಪ್ರಕಾರ, ಕಾರ್ಯಕ್ರಮದ ದಿನದಂದು ವಿಶೇಷ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ:

ಬೆಳಿಗ್ಗೆ 3 ಗಂಟೆಗೆ ಶ್ರೀಗಳ ಗದ್ದುಗೆಗೆ ಮಹಾರುದ್ರಾಭಿಷೇಕ ನೆರವೇರಲಿದೆ.
ಬೆಳಿಗ್ಗೆ 7ರಿಂದ ಉಪಹಾರ ಹಾಗೂ ಬೆಳಿಗ್ಗೆ 11:30ರಿಂದ ರಾತ್ರಿ 11:30ರವರೆಗೆ ನಿರಂತರ ಅನ್ನದಾಸೋಹ ನಡೆಯಲಿದೆ.
ಸಂಜೆ 4 ಗಂಟೆಯಿಂದ ಮಠದ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನಗೊಳ್ಳಲಿವೆ.

ಸುಮಾರು 30 ರಿಂದ 40 ಸಾವಿರ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ವೇದಿಕೆಯ ಮುಂಭಾಗದಲ್ಲಿ 8 ಸಾವಿರ ಜನರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಮಠದ ಜಂಟಿ ಕಾರ್ಯದರ್ಶಿ ಪ್ರೊ. ಶಿವಕುಮಾರಯ್ಯ, ಟಿ. ಕೆ. ನಂಜುಂಡಪ್ಪ ಹಾಗೂ ಪುರುಷೋತ್ತಮ್ ಉಪಸ್ಥಿತರಿದ್ದರು.

Must Read