August 30, 2026
Sunday, August 30, 2026
spot_img

ಆಲಿಕಲ್ಲು ಮಳೆಗೆ ನಲುಗಿದ ನವಲಗುಂದ: ಸಿಡಿಲು ಬಡಿದು ಎಮ್ಮೆ ಸಾ*ವು

ಹೊಸದಿಗಂತ ನವಲಗುಂದ:

ತಾಲ್ಲೂಕಿನಾದ್ಯಂತ ಮಂಗಳವಾರ ಸಂಜೆ ಗುಡುಗು, ಸಿಡಿಲು ಹಾಗೂ ಬಿರುಗಾಳಿ ಸಹಿತ ಭಾರಿ ಆಲಿಕಲ್ಲು ಮಳೆ ಸುರಿದಿದ್ದು, ಸಿಡಿಲು ಬಡಿದ ರಭಸಕ್ಕೆ ಎಮ್ಮೆಯೊಂದು ಮೃತಪಟ್ಟಿರುವ ದಾರುಣ ಘಟನೆ ವರದಿಯಾಗಿದೆ.

ತಾಲ್ಲೂಕಿನ ದಾಟನಾಳ ಗ್ರಾಮದ ಸಮೀಪದ ನಿವಾಸಿ ಶೇಖಪ್ಪ ಹೂಗಾರ ಎಂಬುವವರಿಗೆ ಸೇರಿದ ಎಮ್ಮೆ ಸಿಡಿಲಿಗೆ ಬಲಿಯಾಗಿದೆ. ಮನೆಯ ಬಾಗಿಲ ಬಳಿಯೇ ಕಟ್ಟಲಾಗಿದ್ದ ಎಮ್ಮೆ, ಗುಡುಗು-ಸಿಡಿಲಿನ ಅಬ್ಬರಕ್ಕೆ ಸ್ಥಳದಲ್ಲೇ ಪ್ರಾಣ ಬಿಟ್ಟಿದೆ ಎಂದು ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಕಸ್ತೂರೆವ್ವ ರಾಯನಾಯ್ಕರ ಮಾಹಿತಿ ನೀಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ತಹಸೀಲ್ದಾರ್ ಸುಧೀರ್ ಸಾವುಕಾರ ಅವರು, “ಘಟನೆಯ ಬಗ್ಗೆ ಈಗಾಗಲೇ ಪಶುವೈದ್ಯರೊಂದಿಗೆ ಚರ್ಚಿಸಲಾಗಿದೆ. ಬುಧವಾರ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದು, ಸಂತ್ರಸ್ತ ರೈತರಿಗೆ ನಿಯಮಾನುಸಾರ ಸೂಕ್ತ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುವುದು” ಎಂದು ಭರವಸೆ ನೀಡಿದ್ದಾರೆ.

ತಾಲ್ಲೂಕಿನ ಬೋಗಾನೂರ ಗ್ರಾಮದಲ್ಲೂ ಮಳೆ-ಗಾಳಿಯ ಆರ್ಭಟ ಜೋರಾಗಿದ್ದು, ಮರದ ಕೊಂಬೆಯೊಂದು ಮನೆಯ ಮೇಲೆ ಬಿದ್ದ ಪರಿಣಾಮ ಮನೆಗೆ ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ತಾಲ್ಲೂಕಿನಾದ್ಯಂತ ಹಠಾತ್ ಸುರಿದ ಈ ಮಳೆಯಿಂದಾಗಿ ರೈತರು ಹಾಗೂ ಸಾರ್ವಜನಿಕರು ಆತಂಕಕ್ಕೊಳಗಾಗಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !