ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಹಳ್ಳಿಗಳಿಗೆ ಹೋಲಿಸಿದರೆ ನಗರಗಳಲ್ಲಿ ಸಮುದಾಯ ಪ್ರಜ್ಞೆ ಕಡಿಮೆ. ಪಕ್ಕದಲ್ಲಿ ಯಾರಿದ್ದಾರೆಂಬುದು ತಿಳಿದಿರುವುದಿಲ್ಲ ಎನ್ನುವುದು ನಗರ ಜೀವನದ ಬಗ್ಗೆ ಆಗಾಗ ಹೇಳುವ ಮಾತು. ಯಾವಾಗ ಒಂದು ಜಾಗದಲ್ಲಿ ವಾಸಿಸುವ ಜನಸಮೂಹಕ್ಕೆ ಸಾರ್ವತ್ರಿಕವಾಗಿ ನಮ್ಮದೆನ್ನುವ ಕೆಲವು ಸಂಗತಿಗಳಿರುತ್ತವೆಯೋ ಆಗ ಸಮುದಾಯ ಪ್ರಜ್ಞೆ ಮತ್ತು ಜತೆಯಲ್ಲೇ ಸಮಾಜಕ್ಕೆ ಒಳಿತಾಗುವ ನಿಟ್ಟಿನಲ್ಲಿ ಕೆಲಸಗಳಾಗುತ್ತವೆ.
ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಅಕ್ಷಯ ನಗರದ ಕೆರೆಗೆ ಡಿಸೆಂಬರ್ 17ರ ಭಾನುವಾರ ನೆರವೇರಿದ 7ನೇ ವರ್ಷದ ಗಂಗಾರತಿ ಕಾರ್ಯಕ್ರಮ ಈ ನಿಟ್ಟಿನಲ್ಲಿ ಮಾದರಿಯಾಗುವಂತಿದೆ.
2000ಕ್ಕೂ ಅಧಿಕ ಜನ ಕಾರ್ಯಕ್ರಮದಲ್ಲಿ ಭಾಗವಹಿಸಿ ಪರಿಸರ ಪ್ರೀತಿ ಮೆರೆದರು. ಪರಿಸರ ಗೀತೆ, ಮಕ್ಕಳಿಂದ ಮೂಡಿಬಂದ ಪರಿಸರ ಸಂರಕ್ಷಣೆ ಜಾಗೃತಿ ಕಿರು ನಾಟಕ, ಮಕ್ಕಳಿಂದ ಪರಿಸರ ಕಾಳಜಿಯ ಚಿತ್ರಗಳ ಪ್ರದರ್ಶನ ಮತ್ತು ಪವಿತ್ರ ಜಲಕ್ಕೆ ಸಾಂಪ್ರದಾಯಿಕ ಪೂಜೆ ಕಾರ್ಯಕ್ರಮ ಹೀಗೆ ನಾನಾ ಬಗೆಯಲ್ಲಿ ಕಾರ್ಯಕ್ರಮ ರಂಗೇರಿತ್ತು. ಕೆರೆಯ ಸುತ್ತ ಮುಸ್ಸಂಜೆಯಲ್ಲಿ ಬೆಳಗಲಾದ ಸಾವಿರಾರು ಹಣತೆಯ ದೀಪ ಕಣ್ಮನ ಸೆಳೆಯಿತು.
ನಮ್ಮ ಕೆರೆ ನಮ್ಮ ಹೆಮ್ಮೆ, ಕೆರೆಗಳನ್ನು ಉಳಿಸಿ ಸಂರಕ್ಷಿಸಿ ಎನ್ನುವ ಸೆಲ್ಫಿ ಪಾಯಿಂಟ್ ಸಹ ವಿಶೇಷ ಗಮನ ಸೆಳೆಯಿತು.
ಜಲನಿಧಿ ತಂಡದ ಮುಖ್ಯಸ್ಥರಾದ ರಮೇಶ ಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿ “ಜೀವ ಜಲಕ್ಕೆ ವಂದನೆ ಸಲ್ಲಿಸುವುದು ನಮ್ಮ ಸನಾತನ ಸಂಸ್ಕೃತಿಯಲ್ಲಿರುವ ಸಂಪ್ರದಾಯ . ಜಲ ನಮ್ಮ ಜೀವನಾಡಿ ಇದನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಸಾಮೂಹಿಕ ಸಹಭಾಗಿತ್ವದಿಂದ ಸ್ಥಳಿಯ ಜಲಮೂಲಗಳ ಸಂರಕ್ಷಣೆ ಯಶಸ್ವಿಯಾಗುತ್ತದೆ ಪರಿಸರ ರಕ್ಷಣೆಗೆ ಒಕ್ಕೊರಲಿನಿಂದ ಕೆಲಸ ಮಾಡಬೇಕು” ಎಂದು ಹೇಳಿದರು. ಬೆಂಗಳೂರು ದಕ್ಷಿಣ ವಿಧಾನಸಭಾ ಶಾಸಕ ಎಂ ಕೃಷ್ಣಪ್ಪ ಗಂಗಾ ಆರತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತೆ ಗಂಗೆಗೆ ಪೂಜೆ ಸಲ್ಲಿಸಿದರು.