ಹೊಸದಿಗಂತ ಡಿಜಿಟಲ್ ಡೆಸ್ಕ್:
ಈಶಾನ್ಯ ರಾಜ್ಯವಾದ ತ್ರಿಪುರದ ಶಾಲಾ- ಕಾಲೇಜಿನ 828 ವಿದ್ಯಾರ್ಥಿಗಳಲ್ಲಿ ಹೆಚ್‌ಐವಿ ಪಾಸಿಟಿವ್ ಕಾಣಿಸಿಕೊಂಡಿದ್ದು ಇದರಲ್ಲಿ 47 ಸ್ಟೂಡೆಂಟ್ಸ್ ಸಾವನ್ನಪ್ಪಿರುವುದು ಭಾರೀ ಆತಂಕ ಮೂಡಿಸಿದೆ. ಮಕ್ಕಳು ಕಾಲೇಜಿನಲ್ಲಿ ಓದ್ತಿದ್ದಾರೆ ಎಂದುಕೊಂಡ ಪೋಷಕರಿಗೆ ಈ ಸುದ್ದಿ ಆಘಾತ ತಂದಿದೆ.
ನಮ್ಮ ನೋಂದಣಿಯಲ್ಲಿ ಒಟ್ಟು 828 ವಿದ್ಯಾರ್ಥಿಗಳಿಗೆ ಹೆಚ್‌ಐವಿ ಪಾಸಿಟಿವ್ ಕಾಣಿಸಿಕೊಂಡಿದೆ. ಇದರಲ್ಲಿನ 47 ವಿದ್ಯಾರ್ಥಿಗಳು ಈಗಾಗಲೇ ಮೃತಪಟ್ಟಿದ್ದಾರೆ. ಉಳಿದ 572 ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕಾಗಿ ಬೇರೆ ಬೇರೆ ರಾಜ್ಯಗಳಿಗೆ ವಲಸೆ ಹೋಗಿದ್ದಾರೆ ಎಂದು ತ್ರಿಪುರದ ಏಡ್ಸ್ ನಿಯಂತ್ರಣ ಸೊಸೈಟಿಯ ಜಂಟಿ ನಿರ್ದೇಶಕ ಭಟ್ಟಾಚಾರ್ಜಿ ತಿಳಿಸಿದ್ದಾರೆ.
ರಾಜ್ಯದ 220 ಶಾಲೆಗಳು, 24 ಕಾಲೇಜುಗಳು ಹಾಗೂ ಯುನಿರ್ವಸಿಟಿಯಲ್ಲಿ ಓದುವ ವಿದ್ಯಾರ್ಥಿಗಳು ಡ್ರಗ್ಸ್ ಇಂಜೆಕ್ಷನ್ ಅನ್ನು ತೆಗೆದುಕೊಳ್ಳುತ್ತಿದ್ದಾರೆ. ಇದರಿಂದ ಈ ಹೆಚ್‌ಐವಿ ಒಬ್ಬರಿಂದ ಒಬ್ಬರಿಗೆ ಹರಡುತ್ತಿದೆ. ಈ ಎಲ್ಲ ಶಾಲಾ-ಕಾಲೇಜುಗಳನ್ನು ನಾವು ಪತ್ತೆ ಮಾಡಿದ್ದು ಅಲ್ಲಿನ ಹಲವು ವಿದ್ಯಾರ್ಥಿಗಳು ಆ ಡ್ರಗ್ಗೆ ಅಡಿಕ್ಟ್ ಆಗಿದ್ದಾರೆ. ನಾವು ರಾಜ್ಯಾದ್ಯಂತ ಒಟ್ಟು 164 ಆರೋಗ್ಯ ಕೇಂದ್ರಗಳಿಂದ ಈ ಡೇಟಾ ಸಂಗ್ರಹಿಸಿರುವುದಾಗಿ ಅವರು ಮಾಹಿತಿ ನೀಡಿದ್ದಾರೆ.
ಈ ಡ್ರಗ್ಗೆ ಅಡಿಕ್ಟ್ ಆದವರೆಲ್ಲ ಶ್ರೀಮಂತ ಮನೆಯ ಮಕ್ಕಳು ಆಗಿದ್ದಾರೆ. ಇನ್ನು ತಂದೆ, ತಾಯಿ ಇಬ್ಬರು ಕೆಲಸದಲ್ಲಿ ಬ್ಯುಸಿ ಇರುವಾಗ ಮಕ್ಕಳು ಈ ಮಾದಕ ದ್ರವ್ಯಗಳಿಗೆ ಬಲಿಯಾಗುತ್ತಿದ್ದಾರೆ. ಮಕ್ಕಳು ಈ ಬಗ್ಗೆ ಅರಿತುಕೊಳ್ಳುವಷ್ಟರಲ್ಲಿ ಅವರು ಮೃತಪಡುತ್ತಿದ್ದಾರೆ. ತ್ರಿಪುರದಲ್ಲಿ 5,674 ಮಂದಿಗೆ ಹೆಚ್‌ಐವಿ ಪಾಸಿಟಿವ್ ಇದ್ದು ಇದರಲ್ಲಿ 4,570 ಮಂದಿ ಪುರುಷರು, 1,103 ಮಂದಿ ಮಹಿಳೆಯರು ಸೇರಿದ್ದಾರೆ.
ಅಲ್ಲದೇ ಪ್ರತಿ ನಿತ್ಯ 5 ರಿಂದ 7 ಹೊಸ ಹೆಚ್‌ಐವಿ ಪಾಸಿಟಿವ್ ಕೇಸ್ ಪತ್ತೆಯಾಗುತ್ತಿರುವುದು ಆತಂಕ ಮೂಡಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.