ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಂಧ್ರಪ್ರದೇಶದ ಪೋಲಾವರಂ ಜಿಲ್ಲೆಯ ದೇವರಪಲ್ಲಿ ಬುಡಕಟ್ಟು ಆಶ್ರಮ ಶಾಲೆಯಲ್ಲಿ ಬಿಸಿಯೂಟ ಸೇವಿಸಿದ ಬಳಿಕ ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಘಟನೆ ಆತಂಕಕ್ಕೆ ಕಾರಣವಾಗಿದೆ. ಶಾಲೆಯ ಸುಮಾರು 255 ವಿದ್ಯಾರ್ಥಿಗಳು ಇಡ್ಲಿ–ಚಟ್ನಿ ಉಪಹಾರ ಸೇವಿಸಿದ ನಂತರ 89 ಮಂದಿ ವಾಂತಿ ಮತ್ತು ಹೊಟ್ಟೆನೋವಿನಿಂದ ಬಳಲಿದ್ದಾರೆ.
ಸ್ಥಿತಿಯನ್ನು ಗಮನಿಸಿದ ಶಾಲಾ ಸಿಬ್ಬಂದಿ ತಕ್ಷಣ ವೈದ್ಯಕೀಯ ನೆರವು ಒದಗಿಸಿದ್ದು, 18 ಮಂದಿಯನ್ನು ಮರೆದುಮಿಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹಾಗೂ 71 ಮಂದಿಯನ್ನು ರಂಪಚೋಡವರಂ ಪ್ರದೇಶ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಲ್ಲ ವಿದ್ಯಾರ್ಥಿಗಳಿಗೂ ಚಿಕಿತ್ಸೆ ನೀಡಲಾಗುತ್ತಿದ್ದು, ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಇದನ್ನೂ ಓದಿ:
ಜಿಲ್ಲಾ ಆರೋಗ್ಯ ಹಾಗೂ ಬುಡಕಟ್ಟು ಕಲ್ಯಾಣ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಆಹಾರ ಮತ್ತು ಕುಡಿಯುವ ನೀರಿನ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಿದ್ದಾರೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಸಂಪೂರ್ಣ ತನಿಖೆಗೆ ಆದೇಶಿಸಿದ್ದಾರೆ. ನಿರ್ಲಕ್ಷ್ಯ ತೋರಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ.



