ಹೊಸದಿಗಂತ ಡಿಜಿಟಲ್ ಡೆಸ್ಕ್:
ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ಕಡಿ ತಾಲೂಕಿನ ಜಸಾಲ್‌ಪುರ ಗ್ರಾಮದ ಬಳಿ ಖಾಸಗಿ ನಿರ್ಮಾಣ ಸ್ಥಳದಲ್ಲಿ ಗೋಡೆ ಕುಸಿದು ಒಂಬತ್ತು ಕಾರ್ಮಿಕರು ಸಾವನ್ನಪ್ಪಿದ್ದಾರೆ.
ಸುದ್ದಿ ತಿಳಿದು ಪ್ರಧಾನಿ ಮೋದಿ ಬೇಸರ ವ್ಯಕ್ತಪಡಿಸಿದ್ದಾರೆ. ಗೋಡೆ ಕುಸಿದು ಜನರು ಸಾವನ್ನಪ್ಪಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ. ಗುಜರಾತಿನ ಮೆಹ್ಸಾನಾದಲ್ಲಿ ಗೋಡೆ ಕುಸಿತದಿಂದ ಸಂಭವಿಸಿದ ಅಪಘಾತವು ಅತ್ಯಂತ ದುಃಖಕರವಾಗಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ರಾಜ್ಯ ಸರ್ಕಾರದ ಮೇಲ್ವಿಚಾರಣೆಯಲ್ಲಿ, ಸ್ಥಳೀಯ ಆಡಳಿತವು ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸುವಲ್ಲಿ ತೊಡಗಿದೆ ಎಂದರು.
ಮೆಹ್ಸಾನಾ ಜಿಲ್ಲಾ ಕೇಂದ್ರದಿಂದ ಸುಮಾರು 37 ಕಿಲೋಮೀಟರ್ ದೂರದಲ್ಲಿರುವ ಕಾಡಿ ಪಟ್ಟಣದ ಬಳಿ ಈ ಘಟನೆ ನಡೆದಿದೆ. ಜಸಾಲ್‌ಪುರ ಗ್ರಾಮದಲ್ಲಿ ಕಾರ್ಖಾನೆಯೊಂದಕ್ಕೆ ಸಂಪ್ ನಿರ್ಮಿಸಲು ಹಲವಾರು ಕಾರ್ಮಿಕರು ಹೊಂಡವನ್ನು ಅಗೆಯುತ್ತಿದ್ದಾಗ ಸಡಿಲವಾದ ಮಣ್ಣು ಅವರ ಮೇಲೆ ಕುಸಿದಿದೆ ಎಂದು ಕಡಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಪ್ರಹ್ಲಾದ್ ಸಿಂಗ್ ವಘೇಲಾ ತಿಳಿಸಿದ್ದಾರೆ. ಘಟನೆಗೆ ಆಡಳಿತವು ತಕ್ಷಣವೇ ಸ್ಪಂದಿಸಿತ್ತು. ಆದರೆ ಮಣ್ಣಿನಲ್ಲಿ ಹೂತುಹೋದ ಹತ್ತು ಕಾರ್ಮಿಕರಲ್ಲಿ ಒಬ್ಬರು ಮಾತ್ರ ಬದುಕುಳಿದ್ದಾರೆ.