ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಲೆನಾಡಿನಲ್ಲಿ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯ ಪರಿಣಾಮ ತುಂಗಭದ್ರಾ ಜಲಾಶಯದಲ್ಲಿ ಒಳಹರಿವು ಹೆಚ್ಚಾಗಿದೆ. ಪರಿಣಾಮವಾಗಿ ಟಿ.ಬಿ.ಡ್ಯಾಂನ 26 ಗೇಟ್‌ಗಳನ್ನು ತೆರೆಯಲಾಗಿದ್ದು, ಸುಮಾರು 90,893 ಕ್ಯೂಸೆಕ್ ನೀರನ್ನು ತುಂಗಭದ್ರಾ ನದಿಗೆ ಬಿಡುಗಡೆ ಮಾಡಲಾಗಿದೆ. ಈ ನಿರೀಕ್ಷಿತ ನೀರಿನ ಹರಿವಿನಿಂದ ಹಂಪಿಯ ಅನೇಕ ಐತಿಹಾಸಿಕ ಸ್ಮಾರಕಗಳಿಗೆ ಮುಳುಗಡೆ ಭೀತಿ ಎದುರಾಗಿದೆ.
ಒಳಹರಿವಿನಲ್ಲಿ ಏರಿಕೆಯಾಗುತ್ತಿರುವುದರಿಂದ ಟಿ.ಬಿ.ಡ್ಯಾಂನ ಒಟ್ಟು 33 ಗೇಟ್‌ಗಳ ಪೈಕಿ 26 ಕ್ರಸ್ಟ್ ಗೇಟ್‌ಗಳ ಮೂಲಕ ನೀರು ಬಿಡಲಾಗುತ್ತಿದೆ. ಜಲಾಶಯದಿಂದ ಏಕಾಏಕಿ ಈ ಪ್ರಮಾಣದ ನೀರು ಹರಿಬಿಟ್ಟಿರುವುದರಿಂದ, ನದಿಪಾತ್ರದ ಗ್ರಾಮಗಳು ಪ್ರವಾಹದ ಆತಂಕಕ್ಕೆ ಒಳಗಾಗಿವೆ. ಈ ಹಿನ್ನೆಲೆ ನದಿ ತೀರ ಪ್ರದೇಶದ ನಿವಾಸಿಗಳಿಗೆ ಎಚ್ಚರಿಕೆ ನೀಡಲಾಗಿದೆ. ಸಾರ್ವಜನಿಕರು ನದಿಗೆ ಸಮೀಪಿಸಬಾರದು ಎಂಬ ಸೂಚನೆಯನ್ನು ಟಿ.ಬಿ.ಬೋರ್ಡ್ ಅಧಿಕಾರಿಗಳು ನೀಡಿದ್ದು, ಹವಾಮಾನದ ಪ್ರಕಾರ ಒಳಹರಿವು ಮತ್ತಷ್ಟು ಹೆಚ್ಚಾದರೆ ಇನ್ನಷ್ಟು ನೀರನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ಹಂಪಿಯು ವಿಶ್ವಪ್ರಸಿದ್ಧ ಹೇರಿಟೇಜ್ ಸ್ಥಳವಾಗಿರುವುದರಿಂದ, ಈ ಪ್ರಾಕೃತಿಕ ಪರಿಸ್ಥಿತಿ ಸ್ಮಾರಕಗಳ ಭದ್ರತೆಗೆ ಆತಂಕ ಸೃಷ್ಟಿಸಿದೆ. ಸದ್ಯ, ನೀರಿನ ಮಟ್ಟ ಹೆಚ್ಚಾಗುತ್ತಿರುವುದರಿಂದ ಹಂಪಿಯ ಪಾಠಕಟ್ಟೆ, ಪುರಾತನ ಮಂಟಪಗಳು ಹಾಗೂ ಕೆಲವು ದೇವಸ್ಥಾನಗಳು ಮುಳುಗಡೆಯ ಅಪಾಯಕ್ಕೆ ಒಳಪಟ್ಟಿವೆ.