ಹೊಸದಿಗಂತ ಡಿಜಿಟಲ್ ಡೆಸ್ಕ್:
ಶೇ.91ರಷ್ಟು ಬೆಂಗಳೂರಿಗರು ಮೆಟ್ರೋ 3ನೇ ಹಂತವನ್ನು ಬಯಸುತ್ತಿದ್ದಾರೆಯೇ ವಿನಃ ಸುರಂಗ ರಸ್ತೆಗಳನ್ನಲ್ಲ ಎಂದು ಸಂಸದ ಪಿಸಿ.ಮೋಹನ್ ಹೇಳಿದ್ದಾರೆ.
ಸುರಂಗ ರಸ್ತೆ ಹಾಗೂ ಮೆಟ್ರೋ ಕುರಿತು ಸಂಸದ ಪಿ.ಸಿ. ಮೋಹನ್ ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸಮೀಕ್ಷೆಯೊಂದನ್ನು ನಡೆಸಿದ್ದು, ಸಮೀಕ್ಷೆಯಲ್ಲಿ 3,516 ಜನರು ಪ್ರತಿಕ್ರಿಯಿಸಿದ್ದಾರೆ. ಈ ಪೈಕಿ ಶೇ.91ರಷ್ಟು ಜನರು 17,780 ಕೋಟಿ ರೂ. ವೆಚ್ಚದ ಸುರಂಗ ರಸ್ತೆ ಪ್ರಸ್ತಾವನೆಗಿಂತ 3ನೇ ಹಂತದ ಮೆಟ್ರೋ ಪರವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಮೀಕ್ಷೆಯಲ್ಲಿ 3,500 ಕ್ಕೂ ಹೆಚ್ಚು ಪ್ರತಿಕ್ರಿಯಿಸಿದ್ದು, ಈ ಪೈಕಿ ಶೇ.91 ಜನರು 17,780 ಕೋಟಿ ರೂ. ವೆಚ್ಚದ ಪ್ರಸ್ತಾವಿತ ಸುರಂಗ ರಸ್ತೆ ಯೋಜನೆಯ ಬದಲು ಮೆಟ್ರೋ 3ನೇ ಹಂತಕ್ಕೆ ಬೆಂಬಲಿಸಿದ್ದಾರೆ. ನಗರದ ಜನರಿಗೆ ಸುರಂಗ ರಸ್ತೆಗಳ ಬದಲು ಉಪನಗರ ರೈಲು, ಮೆಟ್ರೋ ಸಂಪರ್ಕ, ಸಾರ್ವಜನಿಕ ಬಸ್, ಉತ್ತಮ ಪಾದಚಾರಿ ಮಾರ್ಗಗಳು, ಸೈಕ್ಲಿಂಗ್ ಮೂಲಸೌಕರ್ಯ ಮತ್ತು ಗುಂಡಿ-ಮುಕ್ತ ರಸ್ತೆಗಳು ಬೇಕಾಗಿವೆ ಎಂದು ಪಿಸಿ ಮೋಹನ್ ಅವರು ಹೇಳಿದ್ದಾರೆ.
ಮೆಟ್ರೋದ 3ಎ ಹಂತವು ಹೆಬ್ಬಾಳದಿಂದ ಸರ್ಜಾಪುರಕ್ಕೆ (ರೆಡ್ ಲೈನ್) ಇನ್ನೂ ಸಿದ್ಧತೆ ಹಂತದಲ್ಲಿದ್ದರೂ, ಇದು ಪ್ರಸ್ತಾವಿತ ಸುರಂಗ ರಸ್ತೆ ಯೋಜನೆಯಂತೆಯೇ ಮಾರ್ಗವನ್ನು ಹೊಂದಿದೆ. ಸರ್ಜಾಪುರದಿಂದ ಹೆಬ್ಬಾಳಕ್ಕೆ 36.59 ಕಿಮೀ ಉದ್ದದ ಕೆಂಪು ಮಾರ್ಗವು 22.14 ಕಿಮೀ ಎತ್ತರದ ಮಾರ್ಗ ಮತ್ತು 14.45 ಕಿಮೀ ಭೂಗತ ಮಾರ್ಗವನ್ನು ಒಳಗೊಂಡಿದೆ, ಒಟ್ಟು 28 ನಿಲ್ದಾಣಗಳನ್ನು ಹೊಂದಿದೆ. ರೆಡ್ ಲೈನ್‌ಗೆ 28,405 ಕೋಟಿ ರೂ. ಅಥವಾ ಪ್ರತಿ ಕಿಮೀಗೆ 776.3 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.